ಇಸಿಸ್‌ನ ಮೃತ್ಯು ಕೂಪ ಕೊನೆಗಾಣಿಸಿಯೇ ಸಿದ್ಧ
ಅಮೆರಿಕ ನೇತೃತ್ವದ ಮಿತ್ರ ರಾಷ್ಟ್ರಗಳ...
ವಿಶ್ವಸಂಸ್ಥೆ: ಅಮೆರಿಕ ನೇತೃತ್ವದ ಮಿತ್ರ ರಾಷ್ಟ್ರಗಳ ಪಡೆ ಉಗ್ರ ಸಂಘಟನೆ ಇಸಿಸ್‌ನ ಸಾಯಿಸುವ ಜಾಲ (ನೆಟ್‌ವರ್ಕ್ ಆಫ್ ಡೆತ್) ಅನ್ನು ಕೊನೆಗಾಣಿಸಿಯೇ ಸಿದ್ಧ. ಆ ಸಂಘಟನೆಗೆ ಅರ್ಥವಾಗುವ ಭಾಷೆಯೆಂದರೆ ಬಲ.
ಹೀಗೆಂದು ಗುಡುಗಿದ್ದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ವಿಶ್ವ ಸಂಸ್ಥೆಯಲ್ಲಿ ಮಾತನಾಡಿದ ಅವರು ಇಸಿಸ್ ಸಂಘಟನೆಯ ಜಾಲ ಕ್ಯಾನ್ಸರ್ ಇದ್ದಂತೆ ಅದನ್ನು ನಾಶಮಾಡಲೇಬೇಕೆಂದು ಹೇಳಿದ್ದಾರೆ. ಇಸಿಸ್ ಸಂಘಟನೆ ಜತೆ ಗುರುತಿಸಿಕೊಂಡ ವ್ಯಕ್ತಿಗಳಿಗೂ, ಸಂಘಟನೆಗಳು ಕಠಿಣ ಕ್ರಮಕ್ಕೆ ಒಳಗಾಗಲಿವೆ ಎಂದು ಒಬಾಮ ಎಚ್ಚರಿಕೆ ನೀಡಿದ್ದಾರೆ. ಮುಸ್ಲಿಂ ಸಮುದಾಯ ಭಯೋತ್ಪಾದನೆಗೆ ಯಾವುದೇ ರೀತಿಯಲ್ಲಿ ಸಹಕಾರ ನೀಡಬಾರದು ಎಂದು ಮನವಿ ಮಾಡಿದ್ದಾರೆ. ಇದರ ಜತೆಗೆ ವಿಶ್ವವನ್ನು ಎಬೋಲಾದಂಥ ಮಾರಕ ರೋಗಗಳಿಂದ ರಕ್ಷಿಸಬೇಕಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಫ್ರಾನ್ಸ್ ಪ್ರಜೆ ಶಿರಚ್ಛೇದ: ಕಳೆದ ಭಾನುವಾರ ಇಸಿಸ್ ಉಗ್ರರು ಅಪಹರಿಸಿದ ಫ್ರಾನ್ಸ್‌ನ ಪ್ರಜೆಯೊಬ್ಬರ ಶಿರಚ್ಛೇದ ಮಾಡಿದ್ದಾರೆ. ಇರಾಕ್‌ನಲ್ಲಿ ಅಮೆರಿಕದ ಜತೆಗೂಡಿ ತನ್ನ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆ ನಿಲ್ಲಿಸದೇ ಇದ್ದ ಹಿನ್ನೆಲೆಯಲ್ಲಿ ಸಂಘಟನೆ ಈ ಕೃತ್ಯ ಎಸಗಿರುವುದಾಗಿ ಸಂಘಟನೆ ಹೇಳಿಕೊಂಡಿದೆ. ಹೆರ್ವ್ ಗಾರ್ಡೆಲ್ (55) ಎಂಬ ಫ್ರಾನ್ಸ್ ಪ್ರಜೆಯನ್ನು ಕಳೆದ ಭಾನುವಾರ ಅಲ್ಜೀರಿಯಾದ ರಾಷ್ಟ್ರೀಯ ಉದ್ಯಾನ ಪ್ರದೇಶದಿಂದ ಅಪಹರಿಸಲಾಗಿತ್ತು. ಶಿರಚ್ಛೇದಕ್ಕೆ ಮುನ್ನ ಉಗ್ರ ಸಂಘಟನೆ ವಿಡಿಯೋವನ್ನು ಬಿಡುಗಡೆ ಮಾಡಿತ್ತು. ಅಮೆರಿಕ ಸರ್ಕಾರದ ಜತೆಗೂಡಿ ಇರಾಖ್‌ನಲ್ಲಿ ಇಸಿಸ್ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆ ನಿಲ್ಲಿಸದೇ ಇದ್ದರೆ ಗಾರ್ಡೆಲ್ ತಲೆಕಡಿಯುವುದಾಗಿ ಎಚ್ಚರಿಕೆ ನೀಡಿತ್ತು. ಮಾತ್ರವಲ್ಲದೆ 24 ಗಂಟೆಗಳ ಗಡುವನ್ನೂ ನೀಡಿತ್ತು. ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಭಾಗವಹಿಸಲು ಅಮೆರಿಕಕ್ಕೆ ಬಂದಿರುವ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಂಡೆ ಕೂಡಾ ಈ ವಿಚಾರ ಖಚಿತಪಡಿಸಿದ್ದಾರೆ.