ಸರ್ಕಾರದಿಂದಲೇ ಬ್ಲ್ಯಾಕ್ ಮೇಲ್!
ದುಪ್ಪಟ್ಟು ಶುಲ್ಕ ವಸೂಲಿಗೆ ಅನುಮತಿ ನೀಡುವ ಸರ್ಕಾರ, ಆ ಶುಲ್ಕ ಕಟ್ಟದಿದ್ದರೆ ಕಾಲೇಜು ಆಸ್ತಿ ಮುಟ್ಟುಗೋಲು ಹಾಕುತ್ತದೆ!..
ಬೆಂಗಳೂರು: ದುಪ್ಪಟ್ಟು ಶುಲ್ಕ ವಸೂಲಿಗೆ ಅನುಮತಿ ನೀಡುವ ಸರ್ಕಾರ, ಆ ಶುಲ್ಕ ಕಟ್ಟದಿದ್ದರೆ ಕಾಲೇಜು ಆಸ್ತಿ ಮುಟ್ಟುಗೋಲು ಹಾಕುತ್ತದೆ!
ರಾಜ್ಯದಲ್ಲಿ ಎಲ್ಲ 314 ಅನುದಾನಿತ ಖಾಸಗಿ ಪದವಿ ಕಾಲೇಜುಗಳಿಗೆ ಶುಲ್ಕ ಸ್ವರೂಪದ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ ಪ್ರತಿವರ್ಷ ಆದೇಶ ಹೊರಡಿಸುತ್ತದೆ. ಅದರಂತೆ ಮೇ7ಕ್ಕೆ ಎಲ್ಲ ಅನುದಾನಿತ ಕಾಲೇಜುಗಳಿಗೆ ಪತ್ರ ಬರೆದು ಬೋಧನೆ ಹಾಗೂ ಪ್ರಯೋಗಾಲಯ ಶುಲ್ಕವನ್ನು ದುಪ್ಪಟ್ಟು ಪಡೆಯಬಹುದೆಂದು ಸೂಚಿಸಿದೆ. ಜತೆಗೆ ಕಾಲೇಜು ಅಭಿವೃದ್ಧಿಗೆ ಪ್ರತಿ ವಿದ್ಯಾರ್ಥಿಯಿಂದ ರು.600ವರೆಗೆ ಹೆಚ್ಚುವರಿಗೆ ಶುಲ್ಕ ವಸೂಲಿಗೂ ಅವಕಾಶ ನೀಡಿತ್ತು.
ಆದರೆ ಸೆ.19ರಂದು ಹೊರಡಿಸಿದ ಶೋಕಾಸ್ ನೋಟಿಸ್ ಪ್ರಕಾರ ,2004-05 ಸಾಲಿನಿಂದ 2014-15ರವರೆಗೆ ಬೋಧನೆ ಹಾಗು ಪ್ರಯೋಗಾಲಯದ ಹೆಸರಲ್ಲಿ ಪಡೆದ ದುಪ್ಪಟ್ಟು ಶುಲ್ಕವನ್ನು ಸರ್ಕಾರಕ್ಕೆ ಜಮಾ ಮಾಡಿವಂತೆ ಸೂಚಿಸಲಾಗಿದೆ. ಸರ್ಕಾರದ ಜಂಟಿ ಖಾತೆಗೆ ಹಣ ಜಮಾ ಮಾಡದಿದ್ದರೆ ಕರ್ನಾಟಕ ಶಿಕ್ಷಣ ಸಂಸ್ಥೆ ನಿಯಮ 2003ರ 12, 18(17), 18 (19)ರಂತೆ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ. ಸೆ.26ರೊಳಗೆ ಉತ್ತರಿಸದಿದ್ದರೆ ಮುಟ್ಟುಗೋಲು ಧಮಕಿ ಹಾಕಲಾಗಿದೆ.
ನಿಯಮ ಉಲ್ಲಂಘನೆ
ಇದೇ ನಿಯಮದ ಪ್ರಕಾರ, ಶಿಕ್ಷಣ ಸಂಸ್ಥೆಗಳು ಸರ್ಕಾರ ಅಥವಾ ವಿದ್ಯಾರ್ಥಿಗಳಿಗೆ ವಂಚಿಸಿದ್ದರೆ ಮಾನ್ಯತೆ ರದ್ದುಗೊಳಿಸಿ, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವಿದೆ. ಆದರೆ ನಿಯಮ 18(1)ರ ಪ್ರಕಾರ ಬೋಧನೆ ಹಾಗು ಪ್ರಯೋಗಾಲಯ ಶುಲ್ಕವನ್ನು ದುಪ್ಪಟ್ಟು ಪಡೆಯಲು ಅವಕಾಶ ನೀಡಲಾಗಿದೆ. ಮೇ 7ರ ಸುತ್ತೋಲೆಯಲ್ಲಿಯೂ 2003ರ ನಿಯಮದಂತೆ ದುಪ್ಪಟ್ಟು ಶುಲ್ಕ ಪಡೆಯಬಹುದು ಎಂದು ಸೂಚಿಸಲಾಗಿದೆ. ಸರ್ಕಾರದ ನೋಟಿಸ್ನಂತೆ ಕಾಲೇಜುಗಳು ಯಾವುದೇ ವಂಚನೆ ಅಥವಾ ಅನ್ಯಾಯ ಮಾಡಿಲ್ಲ.
ಸರ್ಕಾರವೇ ನಿಯಮ ಮಾಡಿ ಹಣ ವಸೂಲಿಗಾಗಿ ನೋಟಿಸ್ ನೀಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಆಡಳಿತ ಮಂಡಳಿಗಳನ್ನು ಹೀಗೆ ಬ್ಲ್ಯಾಕ್ಮೇಲ್ ಮಾಡುತ್ತಿರುವುದಕ್ಕೆ ಆಧಾರವಿದೆ. ಇದೇ ರೀತಿ 2004ರಲ್ಲಿಯೂ ನೋಟಿಸ್ ಜಾರಿ ಮಾಡಿ ಹಣ ನೀಡಲು ಹೇಳಲಾಗಿತ್ತು. ಕೆಲದಿನಗಳ ಬಳಿಕ ಆ ವಿಚಾರ ತಣ್ಣಗಾಗಿತ್ತು.
ಅನುದಾನವಿಲ್ಲ
ಇದ್ಯಾವುದೇ ಕಾಲೇಜುಗಳಿಗೆ ಉಪನ್ಯಾಸಕರ ವೇತನ ಹೊರತಾಗಿ ಯಾವುದೇ ಅನುದಾನ ನೀಡುವುದಿಲ್ಲ. ಪ್ರಯೋಗಾಲಯ, ಬೋಧನಾ ವ್ಯವಸ್ಥೆ ಅಭಿವೃದ್ಧಿಗೆ ಸರ್ಕಾರದ ಬೆಂಬಲವಿಲ್ಲ. ಆಡಳಿತ ಮಂಡಳಿಗಳು ಮೂಲ ಸೌಕರ್ಯ ಅಭಿವೃದ್ಧಿಗೆ ಹಣ ಬಳಸಲೇ ಬೇಕಾಗುತ್ತದೆ. ಇದಕ್ಕಾಗಿಯೇ 1977ರಲ್ಲಿ ಎಲ್ಲ ಅನುದಾನಿತ ಕಾಲೇಜುಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಈ ಒಪ್ಪಂದದಲ್ಲಿಯೂ ದುಪ್ಪಟ್ಟು ಶುಲ್ಕಕ್ಕೆ ಅವಕಾಶವಿದೆ . ಅಷ್ಟಕ್ಕೂ ವಿದ್ಯಾರ್ಥಿಗಳಿಂದ ಕಾಲೇಜುಗಳು ಪಡೆಯುತ್ತಿರುವ ಶುಲ್ಕ ರು.1094 ಮಾತ್ರ.
-ರಾಜೀವ ಹೆಗಡೆ