ಗಡಿ ತಂಟೆ ವಿಶೇಷ ಸಭೆ
ಮಹಾರಾಷ್ಟ್ರದ ಗಡಿ ತಂಟೆ ಕುರಿತು ಚರ್ಚಿಸುವುದಕ್ಕಾಗಿ ಸರ್ಕಾರ ಅಕ್ಟೋಬರ್ ಮೊದಲವಾರದಲ್ಲಿ ಸಾಹಿತಿಗಳು...
ಬೆಳಗಾವಿ: ಮಹಾರಾಷ್ಟ್ರದ ಗಡಿ ತಂಟೆ ಕುರಿತು ಚರ್ಚಿಸುವುದಕ್ಕಾಗಿ ಸರ್ಕಾರ ಅಕ್ಟೋಬರ್ ಮೊದಲವಾರದಲ್ಲಿ ಸಾಹಿತಿಗಳು ಮತ್ತು ಕನ್ನಡ ಹೋರಾಟಗಾರರ ಸಭೆ ಕರೆದಿದೆ.
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ರಾಜ್ಯ ಸರ್ಕಾರ ಗಡಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಇದಕ್ಕಾಗಿಯೇ ಕನ್ನಡ ಸಾಹಿತಿಗಳು ಮತ್ತು ಕನ್ನಡ ಹೋರಾಟಗಾರರೊಂದಿಗೆ ಸಮಾಲೋಚನೆ ನಡೆಸಿ ಅವರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಲಾಗುವುದು. ಅನಂತರ ರಾಜ್ಯ ಸರ್ಕಾರ ಅಗತ್ಯ ಕಾನೂನು ಹೋರಾಟ ನಡೆಸಲು ಬದ್ಧವಾಗಿದೆ ಎಂದರು.
ಸಂಭಾಜಿಯೇ ಕೋರ್ಟ್ ಅಲ್ಲ: 2016ಕ್ಕೆ ಬೆಳಗಾವಿ ಮಹಾರಾಷ್ಟ್ರದಲ್ಲಿ ಇರುತ್ತದೆ ಎಂಬ ಉದ್ಧಟತನದ ಹೇಳಿಕೆಯನ್ನು ಎಂಇಎಸ್ ಶಾಸಕ ಸಂಭಾಜಿ ಪಾಟೀಲ ನೀಡುತ್ತಿದ್ದಾರೆ ಎಂಬುದನ್ನು ಸಿಎಂ ಗಮನಕ್ಕೆ ತಂದಾಗ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಬೆಳಗಾವಿ ಎಂದೆಂದಿಗೂ ಕರ್ನಾಟಕದಲ್ಲೇ ಇರುತ್ತದೆ. ಗಡಿ ವಿಚಾರದಲ್ಲಿ ಎಂಇಎಸ್ನವರ ರಾಜಕೀಯ ಲಾಭ ಪಡೆಯುವುದಕ್ಕಾಗಿ ಈ ರೀತಿ ಹುಯಿಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ.
ಗಡಿ ವಿಚಾರ ಈಗ ಸುಪ್ರೀಂ ಕೋರ್ಟ್ನಲ್ಲಿದೆ. ಗಡಿ ವಿಚಾರದ ಬಗ್ಗೆ ಹೇಳಿಕೆ ನೀಡಲು ಶಾಸಕ ಸಂಭಾಜಿ ಪಾಟೀಲ ಕೋರ್ಟ್ ಅಲ್ಲ ಎಂದರು.
ಬೆಳಗಾವಿ ಕರ್ನಾಟಕ್ಕೆ ಸೇರಿದ್ದು ಎಂದು ಮಹಾಜನ ವರದಿ ಸ್ಪಷ್ಟವಾಗಿ ಹೇಳಿದೆ. ಬೆಳಗಾವಿ ವಿಚಾರ ಈಗಾಗಲೇ ಇತ್ಯರ್ಥವಾಗಿದ್ದು, ನಮಗೆ ನ್ಯಾಯಾಲಯದಲ್ಲಿ ನಂಬಿಕೆ ಇದೆ. ಗಡಿ ವಿಚಾರದಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಳೆದಷ್ಟೂ ಖರೀದಿ!
ಹುಬ್ಬಳ್ಳಿ: ರೈತರು ಎಷ್ಟೇ ರಾಗಿ, ಜೋಳ ಹಾಗೂ ಬತ್ತ ಬೆಳೆದರೂ ಸರ್ಕಾರ ಖರೀದಿಸಲಿದೆ ಎಂದು ಸಿಎಂ ಸಿದ್ಧರಾಮಯ್ಯ ಘೋಷಿಸಿದ್ದಾರೆ. ಧಾರವಾಡ ಕೃಷಿ ವಿಶ್ವ ವಿದ್ಯಾಲಯ ಆಯೋಜಿಸಿರುವ ಕೃಷಿಮೇಳ -2014ನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ರಾಗಿ ಮತ್ತು ಜೋಳಕ್ಕೆ ಪ್ರತಿ ಕ್ವಿಂಟಲ್ಗೆ ರು.2 ಸಾವಿರ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗುವ ಉದ್ದೇಶದಿಂದ ಪ್ರಕಾಶ ಕಮ್ಮರಡಗಿ ಅಧ್ಯಕ್ಷತೆಯಲ್ಲಿ ಕೃಷಿ ಬೆಲೆ ಆಯೋಗ ರಚಿಸಲಾಗಿದೆ ಎಂದು ಹೇಳಿದರು.