ಜಯಲಲಿತಾ ಅರ್ಜಿ ವಿಚಾರಣೆ ಮುಂದೂಡಿಕೆ
ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ದೋಷಿಯಾಗಿ ಜೈಲಿನಲ್ಲಿರುವ ಎಐಎಡಿಎಂಕೆ ನಾಯಕಿ ಜಯಲಲಿತಾ ಹಾಗು...
ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ದೋಷಿಯಾಗಿ ಜೈಲಿನಲ್ಲಿರುವ ಎಐಎಡಿಎಂಕೆ ನಾಯಕಿ ಜಯಲಲಿತಾ ಹಾಗು ಇತರೆ ಮೂವರ ಜಾಮೀನು ಅರ್ಜಿ ವಿಚಾರಣೆ ಇಂದು ನಡೆದಿದ್ದು, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
ಸದ್ಯ ಹೈಕೋರ್ಟ್ ದಸರಾ ರಜೆಯಲ್ಲಿದೆ. ಹೀಗಾಗಿ ಜಯಲಲಿತಾ ಜಾಮೀನು ಅರ್ಜಿಯನ್ನು ಮಂಗಳವಾರಕ್ಕೆ ನಿಗದಿ ಮಾಡಲಾಗಿತ್ತು. ಇದರಂತೆ ನಿನ್ನೆ ನ್ಯಾ.ರತ್ನಕಲಾ ಅವರ ಪೀಠ ವಿಚಾರಣೆ ಕೈಗೆತ್ತಿಕೊಂಡಿತ್ತು. ಹಿರಿಯ ವಕೀಲ ರಾಮ್ ಜೇಠ್ಮಲಾನಿ ಜಯಲಲಿತಾ ಪರವಾಗಿ ವಾದಿಸಿದ್ದು, ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಗಿತ್ತು. ಬುಧವಾರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಅರ್ಜಿಯ ಸಂಪೂರ್ಣ ಪರಿಶೀಲನೆ ಅಗತ್ಯವಿದೆ ಹಾಗು ರಜಾಕಾಲ ಪೀಠದಿಂದ ವಿಚಾರಣೆ ಸೂಕ್ತವಲ್ಲ ಎಂದು ನ್ಯಾ.ರತ್ನಕಲಾ ಅಭಿಪ್ರಾಯ ಪಟ್ಟಿದ್ದಾರೆ.
ಏತನ್ಮಧ್ಯೆ, ಜೇಠ್ಮಲಾನಿ ಅವರು ಹೈಕೋರ್ಟ್‌ಗೆ ಆಗಮಿಸಿದ್ದರೂ ಅವರಿಗೆ ವಾದವನ್ನು ಮಂಡಿಸುವ ಅವಕಾಶವೇ ಸಿಗಲಿಲ್ಲ ಎಂದು ಬಲ್ಲಮೂಲಗಳು ಹೇಳಿವೆ.
ವಿಚಾರಣೆ ಮುಂದೂಡಿರುವುದರಿಂದ ಸೋಮವಾರದವರೆಗೆ ಜಯಲಲಿತಾ ಜೈಲಲ್ಲೇ ಇರಬೇಕಾಗುತ್ತದೆ. ನ್ಯಾಯಾಲಯ ರಜೆಯಲ್ಲಿರುವುದರಿಂದ ಒಂದು ವೇಳೆ ಸೋಮವಾರ ವಿಚಾರಣೆ ನಡೆಯದೇ ಇದ್ದರೆ, ಮಂಗಳವಾರದ ವರೆಗೆ ಜಯಲಲಿತಾ ಅವರು ಜೈಲಲ್ಲೇ ಇರಬೇಕಾಗುತ್ತದೆ.