ನವದೆಹಲಿ: ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಿನ್ನಮತೀಯ ನಾಯಕರಾದ ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಅವರ ಪರ ವಹಿಸಿದ್ದ ಪಟಿಯಾಲದ ಎಎಪಿ ಲೋಕಸಭಾ ಸದಸ್ಯ ಧರ್ಮವೀರ ಗಾಂಧಿ ತಮ್ಮ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ದೂರಿ ಎಎಪಿ ಅಧ್ಯಕ್ಷ ಅರವಿಂದ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದಾರೆ.
ಲೋಕಸಭೆಯಲ್ಲಿ ಪಕ್ಷದ ನಾಯಕರೂ ಆಗಿರುವ ಗಾಂಧಿ, ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಉಚ್ಚಾಟನೆಗೊಂಡ ನಂತರ ಯಾದವ್ ಹಾಗೂ ಭೂಷಣ್ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕೂಡ ಕಾಣಿಸಿಕೊಂಡಿದ್ದರು ಹಾಗು ಪ್ರಜಾಪ್ರಭುತ್ವದ ಮೂಲ ಧ್ಯೇಯಗಳನ್ನು ಮೀರಿದ್ದಕ್ಕೆ ಪಕ್ಷದ ನಾಯಕರ ವಿರುದ್ಧ ಹರಿಹಾಯ್ದಿದ್ದರು.
ಗಾಂಧಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಪತ್ರದ ವಿಷಯದ ಬಗ್ಗೆ ವಿವರಿಸಲು ನಿರಾಕರಿಸಿದ್ದಾರೆ. ಆದರೆ ಪಕ್ಷದ ಮೂಲಗಳ ಪ್ರಕಾರ ಎರಡು ಮೂರು ದಿನಗಳ ಹಿಂದೆಯೇ ಪತ್ರವನ್ನು ಅರವಿಂದ್ ಅವರಿಗೆ ಕಳುಹಿಸಿದ್ದಾರೆ ಹಾಗು ಪತ್ರದಲ್ಲಿ ತಮ್ಮ ವಿರುದ್ಧ ಕೆಸರೆರಚುವ ಪ್ರಯತ್ನ ಹಾಗೂ ತಮ್ಮ ಪ್ರತಿಕೃತಿಗಳನ್ನು ದಹಿಸುತ್ತಿರುವ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆಯೂ ಪಕ್ಷದಲ್ಲಿನ ಆಂತರಿಕ ಜಗಳದ ಬಗ್ಗೆ ಎಚ್ಚರಿಸಿದ್ದ ಗಾಂಧಿ, ಇದು ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದಿದ್ದರು.
"ನಾವು ಎಷ್ಟೇ ದೊಡ್ಡ ನಾಯಕರಾಗಿದ್ದರು, ಅಥವಾ ಕೆಳಮಟ್ಟದ ಕಾರ್ಯಕರ್ತರಾಗಿದ್ದರು ದೇಶದ ಲಕ್ಷಾಂತರ ಬಡಜನ, ನೊಂದ ಭಾರತೀಯರು ಎಎಪಿ ಪಕ್ಷದ ಮೇಲಿಟ್ಟ ನಂಬಿಕೆಯನ್ನು ಹಾಳುಗೆಡವಿವಂತಹ ಕೆಲಸವನ್ನು ಸಿನಿಮೀಯವಾಗಿ ಅದೂ ಸಣ್ಣ ಸಣ್ಣ ಬಗೆಹರಿಸಿಕೊಳ್ಳಬಹುದಾದ ಜಗಳಗಳಿಂದ ಮಾಡಬಾರದು" ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ ಎನ್ನಲಾಗಿದೆ.