ಪ್ರಧಾನ ಸುದ್ದಿ

2015ರ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ರೈತರ ಪರವಾಗಿದೆ: ಜೇಟ್ಲಿ

Vishwanath S

ಬೆಂಗಳೂರು: 2013ರ ಭೂಸ್ವಾಧೀನ ಕಾಯ್ದೆ ರೈತ ವಿರೋಧಿ ಕಾಯ್ದೆಯಾಗಿತ್ತು. ಅದರಲ್ಲಿ ಗ್ರಾಮೀಣ ಬದುಕು ನೀರಾವರಿ, ರಸ್ತೆಗಳು, ವಿದ್ಯುಚ್ಛಕ್ತಿ ಯಾವುದಕ್ಕೂ ಆದ್ಯತೆ ನೀಡಿರಲಿಲ್ಲ. ಆದರೆ 2015ರ ಭೂಸ್ವಾಧೀನ ಕಾಯ್ದೆ ರೈತರ ಪರವಾಗಿದೆ. ಅಲ್ಲದೆ ಇದರಲ್ಲಿ ರೈತರಿಗಾಗಿ ವಿಶೇಷ ಸೌಲತ್ತುಗಳನ್ನು ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಮತ್ತು ವಾರ್ತಾ ಸಚಿವ ಅರುಣ್ ಜೇಟ್ಲಿ ಅವರು ಹೇಳಿದ್ದಾರೆ.

ಉದ್ಯಾನನಗರಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಮುಕ್ತಾಯದ ಬಳಿಕ ಖಾಸಗಿ ಹೋಟೆಲ್ ನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, 2013ರಲ್ಲಿ ಕಾಂಗ್ರೆಸ್ ತಂದಿದ್ದ ಭೂಸ್ವಾಧೀನ ಕಾಯ್ದೆ ರೈತರ ವಿರೋಧಿಯಾಗಿತ್ತು. ಇದರಲ್ಲಿ ರೈತರ ಅಭ್ಯೋದಯಕ್ಕೆ ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ. ಆದರೆ ಪ್ರಸ್ತುತ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಹೊರ ತಂದಿರುವ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ರೈತರ ಪರವಾಗಿದೆ ಎಂದರು.

ಪ್ರಪ್ರಥಮವಾಗಿ ಗ್ರಾಮೀಣ ಪ್ರದೇಶದಲ್ಲಿ ಕೈಗಾರಿಕೆಗಳ ಅಭಿವೃದ್ಧಿ ಆಗಬೇಕಿದೆ ಈ ಮೂಲಕ ಗ್ರಾಮೀಣ ಜನರಿಗೆ ಉದ್ಯೋಗವಕಾಶ ಕಲ್ಪಿಸುವ ಆಸೆ ನಮ್ಮದು. ಆದ್ದರಿಂದ ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿಯೇ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ ಎಂದರು.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದು, ಸರ್ಕಾರದ ಸಾಧನೆ ಬಗ್ಗೆ ದೇಶದಲ್ಲಿ ಒಳ್ಳೆಯ ಅಭಿಪ್ರಾಯವಿದೆ ಎಂದರು.

SCROLL FOR NEXT