ಪ್ರಧಾನ ಸುದ್ದಿ

ಚಿತ್ತೂರು ಎನ್ಕೌಂಟರ್: ಪ್ರತ್ಯಕ್ಷದರ್ಶಿಗಳ ಹೇಳಿಕೆ ದಾಖಲಿಸಿದ ಎನ್ ಎಚ್ ಆರ್ ಸಿ

Guruprasad Narayana

ನವದೆಹಲಿ: ಚಿತ್ತೂರು ಎನ್ಕೌಂಟರ್ ನಲ್ಲಿ ಆಂಧ್ರ ಪ್ರದೇಶದ ಪೊಲೀಸರ ಗುಂಡಿನ ದಾಳಿಗೆ ಬಲಿಯಾದ ೨೦ ಜನ ಮರ ಕಡಿಯುವ ಬುಡಕಟ್ಟಿನವರ ಜೊತೆಗಿದ್ದ ಪ್ರತ್ಯಕ್ಷದರ್ಶಿಗಳಿಂದ ಹೇಳಿಕೆಗಳನ್ನು ದಾಖಲಿಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್ ಎಚ್ ಆರ್ ಸಿ) ಅಧ್ಯಕ್ಷ ಕೆ ಜಿ ಬಾಲಕೃಷ್ಣನ್ ನಿರ್ದೇಶಿಸಿದ್ದಾರೆ. "ನಾನು ಅವರ ಹೇಳಿಕೆಗಳನ್ನು ದಾಖಲಿಸಲು ನಿರ್ದೇಶಿಸಿದ್ದೇನೆ, ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತೇವೆ" ಎಂದು ಬಾಲಕೃಷ್ಣನ್ ಪ್ರತ್ಯಕ್ಷದರ್ಶಿಗಳನ್ನು ಭೇಟಿ ಮಾಡಿದ ಮೇಲೆ ವರದಿಗಾರರಿಗೆ ತಿಳಿಸಿದ್ದಾರೆ.

ಈ ಇಬ್ಬರೂ ಪ್ರತ್ಯಕ್ಷದರ್ಶಿಗಳು ತಾವಾಗಿಯೇ ಮಾನವ ಹಕ್ಕುಗಳ ಆಯೋಗದ ಮುಂದೆ ಬಂದಿದ್ದಾರೆ ಎಂದು ಸ್ಪಷ್ಟಪಡಿಸಿದ ಎನ್ ಎಚ್ ಆರ್ ಸಿ ಅಧಿಕಾರಿಗಳು, ಇವರು ರಕ್ಷಣೆ ಕೋರಿದ್ದಾರೆಯೆ ಎಂಬ ಪ್ರಶ್ನೆಗೆ, ಅವರ ಹೇಳಿಕೆಗಳನ್ನು ದಾಖಲಿಸಿದ ಮೇಲೆ ಅವರಿಗೆ ರಕ್ಷಣೆ ನೀಡುವುದರ ಬಗ್ಗೆ ಚಿಂತಿಸಲಾಗುವುದು ಎಂದಿದ್ದಾರೆ.

ಪೋಲೀಸರ ಈ ಅನುಮಾನಾಸ್ಪದ ನಡೆಯ ಬಗ್ಗೆ ಆಂಧ್ರಪ್ರದೇಶ ಸರ್ಕಾರಕ್ಕೆ ನೊಟೀಸ್ ನೀಡಿರುವ ಆಯೋಗ, ಕ್ರಮ ಕೈಗೊಳ್ಳುವಂತೆ ಆಯೋಗ ಮತ್ತೆ ಮೂರು ದೂರುಗಳನ್ನು ಸ್ವೀಕರಿಸಿದೆ ಎಂದಿದೆ.

ಏಪ್ರಿಲ್ ೭ ರಂದು ತಮಿಳುನಾಡಿನಿಂದ ೨೦ ಜನರನ್ನು ರಕ್ತಚಂದನ ಕಳವು ಮಾಡುತ್ತಿದ್ದರು ಹಾಗು ಪೊಲೀಸರ ಮೇಲೆ ದಾಳಿ ನಡೆಸಿದರು ಎಂಬ ಆರೋಪದ ಮೇಲೆ ಎನ್ಕೌಂಟರ್ ಮಾಡಿ ಕೊಂದುಹಾಕಿದ್ದರು. ಚಿತ್ತೂರು ಜಿಲ್ಲೆಯ ಶೇಷಾಚಲಂ ಬೆಟ್ಟಗಳ ಅರಣ್ಯದಲ್ಲಿ ನಡೆದ ಕಾರ್ಯಾಚರಣೆಯನ್ನು ಯೋಜಿತ ಕೊಲೆ ಎಂದು ಮೃತಪಟ್ಟ ಕುಟುಂಬ ಸದಸ್ಯರು ಆರೋಪಿಸಿದ್ದರು.

ಪೊಲೀಸರು ಕೊಂದದ್ದು ರಕ್ತಚಂದನ ಕಳ್ಳಸಾಗಾಣೆದಾರರನ್ನಲ್ಲ ಆದರೆ ಕೂಲಿಗಳನ್ನು ಎಂದು ಹಲವು ರಾಜಕೀಯ ಪಕ್ಷಗಳು ದೂರಿವೆ.

SCROLL FOR NEXT