ಪ್ರಧಾನ ಸುದ್ದಿ

ಕಾಶ್ಮೀರಿ ಪಂಡಿತರ 'ಘರ್ ವಾಪಸಿ'ಗೆ ಶಿವಸೇನೆ ಆಗ್ರಹ

Guruprasad Narayana

ಮುಂಬೈ: ೨೫ ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದಿಂದ ಒತ್ತಾಯಪೂರ್ವಕವಾಗಿ ಹೊರದೂಡಲ್ಪಟ್ಟ ಕಾಶ್ಮೀರಿ ಪಂಡಿತರಿಗೆ ಸರಿಯಾದ ಹಾಗು ಗೌರವಯುತವಾದ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಶಿವಸೇನೆ ಆಗ್ರಹಿಸಿದೆ.

"ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಬಿಜೆಪಿ ಮತ್ತು ಪಿಡಿಪಿ ಪಕ್ಷಗಳನ್ನೊಳಗೊಂದ ಸ್ಥಿರ ಸರ್ಕಾರ ಇದೆ. ಹಾಗೆಯೇ ಕೇಂದ್ರದಲ್ಲಿ ಬಲಶಾಲಿ ಆಡಳಿತವುಳ್ಳ ನರೇಂದ್ರ ಮೋದಿ ಸರ್ಕಾರ ಇದೆ. ಈಗ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯ್ಯದ್ ಬಿಜೆಪಿ ಸಹಾಯದೊಂದಿಗೆ ಸರ್ಕಾರ ರಚಿಸಿರುವುದರಿಂದ ಕಾಶ್ಮೀರಿ ಪಂಡಿತರಿಗೆ ಸರಿಯಾದ 'ಘರ್ ವಾಪಸಿ' ಆಗಬೇಕು" ಎಂದು ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯ ಅಭಿಪ್ರಾಯ ಪಟ್ಟಿದೆ.

"ಸಯ್ಯದ್ ಅವರು ಕಾಶ್ಮೀರಿ ಪಂಡಿತರಿಗೆ ಪ್ರತ್ಯೇಕ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ಮಾತನ್ನಾಡಿದ್ದಾರೆ. ಅಂದರೆ ಆ ಮಣ್ಣಿನ ಮಕ್ಕಳಿಗೆ ಸ್ಲಂ ಗಳಲ್ಲಿ ವ್ಯವಸ್ಥೆ ಕಲ್ಪಿಸಿಕೊಡುತ್ತೇವೆ ಎಂದರ್ಥವೇ? ಈ ಪ್ರಸ್ತಾವನೆಯನ್ನು ಪ್ರತ್ಯೇಕವಾದಿಗಳು ಕೂಡ ವಿರೋಧಿಸಿದ್ದಾರೆ" ಎಂದು ಪಕ್ಷ ಹೇಳಿದೆ.

ಮುಸ್ಲಿಮರ ಮತದಾನದ ಹಕ್ಕನ್ನು ಕಸಿದುಕೊಳ್ಳಬೇಕು ಎಂದು ಶಿವಸೇನೆ ಆಗ್ರಹಿಸಿದೆ ಎಂಬ ವಿಷಯದ ಬಗ್ಗೆ ಸೃಷ್ಟಿಯಾಗಿರುವ ವಿವಾದದ ಬಗ್ಗೆ ಪ್ರಸ್ತಾಪಿಸಿರುವ ಅವರು ಕಳೆದ ಜಮ್ಮು ಕಾಶ್ಮೀರ ಚುನಾವಣೆಯಲ್ಲಿ ಎಷ್ಟು ಜನ ಕಾಶ್ಮೀರಿ ಪಂಡಿತರು ಮತ ಚಲಾಯಿಸಿದ್ದಾರೆ ಎಂದು ಪ್ರಶ್ನಿಸಿದೆ.

ಮುಸ್ಲಿಮರ ಮತದಾನದ ಹಕ್ಕಿನ ಬಗ್ಗೆ ಹಲವರು ಕೂಗು ಹಾಕುತ್ತಿದ್ದಾರೆ ಒವಾಸಿ (ಅಸಾದುದ್ದೀನ್ ಒವಾಸಿ)ಅಥವಾ ಇತರ ಜಾತ್ಯಾತೀತವಾದಿಗಳು ಎಷ್ಟು ಜನ ಕಾಶ್ಮೀರ ಪಂಡಿತರ ಮತದಾನದ ಹಕ್ಕಿನ ಬಗ್ಗೆ ಮಾತನಾಡಿದ್ದಾರೆ ಎಂದು ಎಂದು ಶಿವಸೇನೆ ಕೇಳಿದೆ.

SCROLL FOR NEXT