ಗುರಗಾಂವ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಂಡಾಯ ನಾಯಕ ಯೋಗೇಂದ್ರ ಯಾದವ್ ಅವರು, ಕೇಜ್ರಿವಾಲ್ ಅವರು ಎಎಪಿಗೆ ಮರಳು ಮಾಡಿದ್ದಾರೆ ಎಂದಿದ್ದಾರೆ.
ಗೊರೆಗಾಂವನಲ್ಲಿ ಬಂಡಾಯ ನಾಯಕರು ಆಯೋಜಿಸಿರುವ ಸ್ವರಾಜ್ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಯಾದವ್, ಆಮ್ ಆದ್ಮಿ ಪಕ್ಷವನ್ನು ಪ್ರಜಾತಂತ್ರ ವ್ಯವಸ್ಥೆಯ ಮೇಲೆ ಸ್ಥಾಪಿಸಲಾಗಿದೆ. ಆದರೆ ಈಗ ಅದು ಮಾತುಕತೆಗೆ ಹೆದರುತ್ತಿದೆ ಎಂದು ಹೇಳಿದರು.
ಇದೇ ವೇಳೆ ನಿಮ್ಮ ಮುಂದಿನ ನಡೆ ಏನು ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಯಾದವ್, 'ಪಕ್ಷದಲ್ಲಿ ಎಲ್ಲವೂ ಸರಿ ಹೋದರೆ ಮಾತ್ರ ನಾವು ನಾಯಕತ್ವದ ಮೇಲೆ ನಂಬಿಕೆ ಇಡಬೇಕು ಎಂಬ ಒಂದು ಅಭಿಪ್ರಾಯ ಇದೆ. ಇಲ್ಲದಿದ್ದರೆ ಹೊಸ ಪಕ್ಷದ ಬಗ್ಗೆ ಚಿಂತನೆ ನಡೆಸಲಾಗುವುದು' ಎಂದು ತಿಳಿಸಿದ್ದಾರೆ. ಅಲ್ಲದೆ ಇಂದು ಸಂಜೆಯೇ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಇದೇ ವೇಳೆ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಮತ್ತೊಬ್ಬ ಬಂಡಾಯ ನಾಯಕ ಶಾಂತಿ ಭೂಷಣ್, ಎಎಪಿ ಕ್ರಾಂತಿಕಾರಿ ಬದಲಾವಣೆಯ ಭರವಸೆ ಮೂಡಿಸಿದೆ. ಹೀಗಾಗಿ ನಾವು ಅದನ್ನು ಮುಳುಗಲು ಬಿಡಬಾರದು ಎಂದು ಹೇಳಿದರು.