ನವದೆಹಲಿ: ಶ್ರೀನಗರ ಹೊರವಲಯದಲ್ಲಿ ಪ್ರತ್ಯೇಕವಾದಿ ಸಯ್ಯದ್ ಅಲಿ ಷಾ ಗಿಲಾನಿ ನೇತೃತ್ವದಲ್ಲಿ ನೆನ್ನೆ ನಡೆದ ದೇಶ ವಿರೋಧಿ ರ್ಯಾಲಿಯಲ್ಲಿ ಪಾಲ್ಗೊಂಡವರ ವಿರದ್ಧ ಅತಿ ಶಿಸ್ತಿನ ಕ್ರಮ ಜರುಗಿಸುವಂತೆ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರ ಸರ್ಕಾರಕ್ಕೆ ಸೂಚಿಸಿದೆ.
ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯ್ಯದ್ ಜೊತೆ ಮಾತನಾಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತೆ ಜೊತೆ ಯಾವುದೇ ರಾಜಿ ಇಲ್ಲ ಎಂದಿದ್ದಾರೆ. ಅಲ್ಲಿನ ಪರಿಸ್ಥಿತಿ ಮತ್ತು ರ್ಯಾಲಿಯಲ್ಲಿ ನಡೆದ ಘಟನೆಗಳ ಬಗ್ಗೆ ಮುಖ್ಯಮಂತ್ರಿ, ರಾಜನಾಥ್ ಸಿಂಗ್ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
"ರಾಷ್ಟ್ರ ವಿರೋಧಿಯಾದ ಯಾವುದೇ ನಡೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಸಯ್ಯದ್ ಅವರಿಗೆ ಸಿಂಗ್ ತಿಳಿಸಿದ್ದಾರೆ.
ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗುತ್ತ, ಪಾಕಿಸ್ತಾನಿ ಧ್ವಜಗಳನ್ನು ಹಾರಿಸುತ್ತಾ ಪಿಡಿಪಿ-ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದ್ದ ಪ್ರತ್ಯೇಕವಾದಿ ಬಣಗಳ ಸಮರ್ಥಕ ಮಾಶರತ್ ಆಲಂ ಅವರು ಶ್ರೀನಗರ ವಿಮಾನ ನಿಲ್ದಾಣದಿಂದ ಗಿಲಾನಿ ಗೃಹದವರೆಗೆ ನಡೆದ ರ್ಯಾಲಿಯ ನಾಯಕತ್ವ ವಹಿಸಿದ್ದರು. ಇದಕ್ಕೆ ತೀವ್ರ ಪ್ರತಿರೋಧ ಕೇಳಿಬಂದಿದೆ. ೨೦೧೦ ರಲ್ಲಿ ಆಲಂ ಸಹಾಯದೊಂದಿಗೆ ಗಿಲಾನಿ ನಡೆಸಿದ್ದ ಪ್ರತಿಭಟನೆಗಳಲ್ಲಿ ೧೦೦ ಯುವಕರು ಸಾವನ್ನಪ್ಪಿದ್ದರು.