ಬೆಂಗಳೂರು: ಕರ್ನಾಟಕ ಸರ್ಕಾರದ ಉದ್ದೇಶಿತ ಮೇಕೆದಾಟು ಕುಡಿಯುವ ನೀರಿನ ಯೋಜನೆಗಾಗಿ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡು ವರ್ತನೆಯನ್ನು ಕನ್ನಡಪರ ಸಂಘಟನೆಗಳು ಒಕ್ಕೊರಲಿನಿಂದ ಖಂಡಿಸಿವೆ.
ತಮಿಳುನಾಡು ವರ್ಚನೆಯನ್ನು ವಿರೋಧಿಸಿ ಇಂದು ನಡೆಯುತ್ತಿರುವ ಕರ್ನಾಟಕ ಬಂದ್ ರಾಜ್ಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ತಮಿಳುನಾಡು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಮತ್ತು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ವಿರುದ್ಧ ಘೋಷಣೆಗಳನ್ನು ಕೂಗಲಾಗುತ್ತಿದೆ. ಇನ್ನು ವಿವಿಧ ಕನ್ನಡ ಪರ ಸಂಘಟನೆ ಬೆಂಗಳೂರಿನ ಟೌನ್ ಹಾಲ್ ನಿಂದ ಫ್ರೀಡಂಪಾರ್ಕ್ ವರೆದೆ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಂಡಿದ್ದು, ಕನ್ನಡ ಒಕ್ಕೂಟದ ಹೆಸರಿನಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ಮತ್ತು ಡಾ.ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾರಾಗೋವಿಂದು ಅವರ ನೇತೃತ್ವದಲ್ಲಿ ರ್ಯಾಲಿ ನಡೆಸಲಾಗುತ್ತಿದೆ.
ರ್ಯಾಲಿಯಲ್ಲಿ ಹಲವಾರು ಕನ್ನಡಪರ ಸಂಘಟನೆಗಳು ಪಾಲ್ಗೊಂಡಿದ್ದು, ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ, ಕನ್ನಡ ಚಳವಳಿ ವಾಟಾಳ್ ಪಕ್ಷ, ಡಾ.ರಾಜ್ ಅಭಿಮಾನಿಗಳ ಸಂಘ, ಸರ್ಕಾರಿ ನೌಕರರ ಸಂಘ, ವಿವಿಧ ಕಾರ್ಮಿಕ ಒಕ್ಕೂಟಗಳ ಕಾರ್ಯಕರ್ತರು, ಜಯ ಕರ್ನಾಟಕ, ಕನ್ನಡಿಗರ ಬಳಗ ಸೇರಿದಂತೆ ಸಾವಿರಾರು ಪ್ರತಿಭಟನಾಕಾರರು ಪಾಲ್ಗೊಂಡಿದ್ದಾರೆ. ಟೌನ್ ಹಾಲ್ ಮೂಲಕವಾಗಿ ಸಾಗುತ್ತಿರುವ ಪ್ರತಿಭಟನಾ ರ್ಯಾಲಿ, ಕಾರ್ಪೋರೇಷನ್ ವೃತ್ತ, ಕೆಂಪೇಗೌಡ ರಸ್ತೆ, ಬನ್ನಪ್ಪ ಪಾರ್ಕ್, ಮೈಸೂರು ಬ್ಯಾಂಕ್ ವೃತ್ತ, ಪ್ಯಾಲೆಸ್ ರಸ್ತೆ ಮೂಲಕವಾಗಿ ಫ್ರೀಡಂ ಪಾರ್ಕ್ ಗೆ ತಲುಪಲಿದೆ.
ಪ್ರತಿಭಟನೆಗೆ ಸಾಥ್ ನೀಡಿದ ನಟ ಶಿವರಾಜ್ ಕುಮಾರ್
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ರಾಜ್ಯಾದ್ಯಂತ ಬಂದ್ ನಡೆಯುತ್ತಿದ್ದು, ಮೈಸೂರಿನಲ್ಲಿ ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಕನ್ನಡ ಪರ ಸಂಘಟನೆಗಳ ಪ್ರತಿಭಟನೆಗೆ ಸಾಥ್ ನೀಡಿದರು.
ಮೈಸೂರಿನ ಅರಮನೆ ಮುಂಬಾಗದ ರಾಜ್ ಕುಮಾರ್ ಪಾರ್ಕ್ ನಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ದಿವಂಗತ ರಾಜ್ ಕುಮಾರ್ ಅವರ ಪ್ರತಿಮೆಗೆ ಹಾರ ಹಾಕಿ ಕನ್ನಡ ಪರ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಶಿವರಾಜ್ ಕುಮಾರ್ ಭಾಗಿಯಾದರು.