ಪ್ರಧಾನ ಸುದ್ದಿ

ವಿಧಾನಸಭೆಯಲ್ಲಿ ಬಿಬಿಎಂಪಿ ವಿಭಜನೆ ವಿಧೇಯಕ ಮಂಡನೆ, ಪ್ರತಿಪಕ್ಷಗಳಿಂದ ತೀವ್ರ ವಾಗ್ದಾಳಿ

Lingaraj Badiger

ಬೆಂಗಳೂರು: ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ರಾಜ್ಯ ಸರ್ಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)/ಯನ್ನು ಮೂರು ಭಾಗ ಮಾಡುವ ಬಿಬಿಎಂಪಿ ವಿಭಜನೆ ತಿದ್ದುಪಡಿ ವಿಧೇಯಕವನ್ನು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಿದೆ.

ಇಂದು ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಉತ್ತರ ಕರ್ನಾಟಕದ  ಬೆಳೆ ಹಾನಿ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು. ಇದಕ್ಕೆ ಒಪ್ಪದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಮಧ್ಯಾಹ್ನ ಅವಕಾಶ ನೀಡುವುದಾಗಿ ಹೇಳಿದರು.

ಈ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ತೀವ್ರ ಗದ್ದಲ ಎಬ್ಬಿಸಿದರು. ಗಲಾಟೆ, ಕೋಲಾಹಲದ ನಡುವೆಯೇ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಬಿಬಿಎಂಪಿ ವಿಭಜನೆಯ ಕರ್ನಾಟಕ ನಗರಪಾಲಿಕೆಗಳ (ತಿದ್ದುಪಡಿ) ವಿಧೇಯಕ, 2015 ಅನ್ನು ಮಂಡಿಸಿದರು.

ವಿಧೇಯಕ ಮಂಡನೆಯಾಗುತ್ತಿದ್ದಂತೆ ಪ್ರತಿಪಕ್ಷ ಸದಸ್ಯರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಗದೀಶ್ ಶೆಟ್ಟರ್ ನಡುವೆ ವಾಕ್ಸಮರ ನಡೆಯಿತು. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕೂಡಾ ಸರ್ಕಾರದ ವಿರುದ್ಧ ಕಿಡಿಕಾರಿದರು.

ಬಿಬಿಎಂಪಿ ವಿಭಜನೆ ಮಾಡುವುದರಿಂದ ಬೆಂಗಳೂರು ಅಭಿವೃದ್ಧಿಯಾಗುತ್ತದೆಯೇ? ಸಮಸ್ಯೆ ಪರಿಹಾರವಾಗುತ್ತೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಅಲ್ಲದೆ ಬೆಂಗಳೂರು ಅಭಿವೃದ್ಧಿಗೆ ಜೆಡಿಎಸ್ ಹಲವು ಕ್ರಮಗಳನ್ನು ಜಾರಿಗೆ ತಂದಿದೆ. ನಮ್ಮ ಅವಧಿಯಲ್ಲೇ ಬೆಂಗಳೂರು ಅಭಿವೃದ್ಧಿಯಾಗಿದೆ ಎಂದು ಹೇಳಿದರು.

ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್,  ಕಾಂಗ್ರೆಸ್ ಆಡಳಿತಾವಧಿಯಲ್ಲೇ ಬೆಂಗಳೂರು ಅಭಿವೃದ್ದಿ ಆಗಿತ್ತು ಎಂದರು. ಈ ಚರ್ಚೆ ನಡುವೆ ಬಿಜೆಪಿ ಸದಸ್ಯರು ಕೂಡಾ ತಮ್ಮ ಕಾಲದಲ್ಲೂ ಬೆಂಗಳೂರು ಅಭಿವೃದ್ಧಿ ಆಗಿತ್ತು ಎಂದು ಪ್ರತಿಪಾದಿಸಿದರು.

ಈ ವೇಳೆ ಸಾರಕ್ಕಿ ಕೆರೆ ಒತ್ತುವರಿ ವಿಚಾರವನ್ನು ಪ್ರಸ್ತಾಪಿಸಿದ ಎಚ್ ಡಿಕೆ, ಇದರ ಹಿಂದೆ ಯಾವ ಅಧಿಕಾರಿ ಇದ್ದಾರೆ ಮತ್ತು ಯಾರಿದ್ದಾರೆ ಎಂದು ಗೊತ್ತು ಎಂದರು. ಇದಕ್ಕೆ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದ ಶಿವಕುಮಾರ್, ತಾಕತ್ತಿದ್ದರೆ ಅವರನ್ನು ಹೆಸರನ್ನು ಬಹಿರಂಗಪಡಿಸಿ ಎಂದು ಸವಾಲು ಹಾಕಿದರು.

SCROLL FOR NEXT