ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನ್ಯಾಯಮೂರ್ತಿಗೇ ಅನ್ಯಾಯ!

ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಬೇಕಿದ್ದ ನನಗೆ ನಮ್ಮ ಸಹೋದ್ಯೋಗಿ ನ್ಯಾಯಮೂರ್ತಿ ಹಾಗೂ ಅವರ ಮಗನ...

ನ್ಯಾ. ಕೆ.ಎಲ್.ಮಂಜುನಾಥ್
Lingaraj Badiger
Updated On : 21 Apr 2015, 12:40 pm

ಬೆಂಗಳೂರು: ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಬೇಕಿದ್ದ ನನಗೆ ನಮ್ಮ ಸಹೋದ್ಯೋಗಿ ನ್ಯಾಯಮೂರ್ತಿ ಹಾಗೂ ಅವರ ಮಗನ ಪಿತೂರಿಯಿಂದ ಅವಕಾಶ ತಪ್ಪಿರುವುದಾಗಿ ನ್ಯಾ.ಕೆ.ಎಲ್.ಮಂಜುನಾಥ್ ತಮ್ಮ ದುಃಖವನ್ನು ಹೊರಹಾಕಿದ್ದಾರೆ.

ನ್ಯಾ. ಕೆ.ಎಲ್.ಮಂಜುನಾಥ್ ಅವರಿಗೆ ವಕೀಲ ಪರಿಷತ್ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ನ್ಯಾಯಾಂಗದ ವ್ಯವಸ್ಥೆಯಲ್ಲಿನ ಶಿಸ್ತನ್ನು ಕಾಪಾಡಿಕೊಳ್ಳುವ ನಿಟ್ಟಿನಿಂದ ಈವರೆಗೂ ಸತ್ಯ ಹೊರಹಾಕಿರಲಿಲ್ಲ. ಇಂದು ಸತ್ಯ ಹೊರಹಾಕುವ ಕಾಲ ಒದಗಿಬಂದಿದೆ. ಇಂದು ನನ್ನ ನಿವೃತ್ತಿ ಆದ್ದರಿಂದ ಈ ಮಾತುಗಳನ್ನು ನಾನೀಗ ಹೇಳಲೇಬೇಕಾದ ಸಂದರ್ಭವಾಗಿದೆ ಎಂದೇ ಎಲ್ಲವನ್ನೂ ಬಿಚ್ಚಿಟ್ಟರು.

ನನ್ನ ವಿರುದ್ಧ ಕೇರಳದ ಕ್ರೈಂ ಎಂಬ ಇಂಗ್ಲಿಷ್ ಪೀತ ಪತ್ರಿಕೆಯಲ್ಲಿ ಸುಳ್ಳು ಸುದ್ದಿ ಬರೆಸಲಾಯಿತು. ಮಂಜುನಾಥ್ ಅಪಾರವಾದ ಅಕ್ರಮ ಆಸ್ತಿ ಗಳಿಸಿದ್ದಾರೆ. ಮಗಳ ಹೆಸರಿನಲ್ಲಿ ಆಸ್ತಿ ಮಾಡಿದ್ದಾರೆ, ತಾವೊಬ್ಬ ದೊಡ್ಡ ಜಾತಿವಾದಿ ಎಂದೆಲ್ಲಾ ಆಪಾದಿಸಲಾಯಿತು. ಇಂತಹ ಆರೋಪಗಳನ್ನು ಮಾಡಿದವರು ಬೇರಾರೂ ಆಗಿರಲಿಲ್ಲ. ಅವರೂ ನನ್ನ ಸಹೋದ್ಯೋಗಿ ನ್ಯಾಯಮೂರ್ತಿಗಳೇ ಆಗಿದ್ದರು. ನನ್ನ ಏಳಿಗೆಗೆ ಕುತ್ತು ತರುವುದೇ ಅವರ ಏಕೈಕ ಉದ್ದೇಶವಾಗಿತ್ತು ಎಂದು ತಮ್ಮ ಅಸಮಾಧಾನ ಹೊರಹಾಕಿದರು. ಮಾತ್ರವಲ್ಲದೇ ತಮ್ಮ ವಿರುದ್ದ ಪ್ರಕಟಣೆಯಾಗಿದ್ದ ಆ ಸುದ್ದಿಯ 50 ಸಾವಿರ ಪ್ರತಿಯನ್ನು ಉಚಿತವಾಗಿ ಹಂಚುವ ಮೂಲಕ ವ್ಯವಸ್ತಿತ ಪಿತೂರಿ ಮಾಡಲಾಯಿತು.

14 ವರ್ಷಗಳಿಂದ ಕರ್ತವ್ಯ: ನಾನು 14 ವರ್ಷ 4 ತಿಂಗಳ ಕಾಲ ನ್ಯಾಯಮೂರ್ತಿಯಾಗಿ ವಿವಿಧ ಸ್ತರಗಳಲ್ಲಿ ದುಡಿದಿದ್ದೇನೆ. ವಿಭಾಗೀಯ ಪೀಠವೊಂದರಲ್ಲೇ ಸುಮಾರು 10 ಸಾವಿರ ಆದೇಶಗಳನ್ನು ನೀಡಿದ್ದೇನೆ. ನ್ಯಾಯಮೂರ್ತಿಯಾಗಿ ನಾನು ಅಸಮರ್ಥ ಎನ್ನುವ ಟೀಕಾಕಾರರಿಗೆ ಈ ಆದೇಶಗಳೇ ಉತ್ತರ ನೀಡುತ್ತವೆ ಎಂದು ಮಾರ್ಮಿಕವಾಗಿ ನುಡಿದರು.

ಹಾಲಿ ಸುಪ್ರೀಂ ಕೋರ್ಟ್‍ನಲ್ಲಿರುವ ಒಬ್ಬ ನ್ಯಾಯಮೂರ್ತಿ, ಹೊರ ರಾಜ್ಯದಲ್ಲಿರುವ, ಇಲ್ಲಿನವರೇ ಆದ ಇನ್ನೊಬ್ಬ ಹಿರಿಯ ನ್ಯಾಯಮೂರ್ತಿ ಹಾಗೂ ಅವರು ಪುತ್ರ ನನ್ನ ವಿರುದ್ಧ ಇನ್ನಿಲ್ಲದ ಷಡ್ಯಂತ್ರ ರೂಪಿಸಿದರು. ಇವರೆಲ್ಲಾ ನಾನು ಪಂಜಾಬ್ - ಹರಿಯಾಣ ಹೈಕೋರ್ಟ್‍ಗೆ ಮುಖ್ಯ ನ್ಯಾಯಮೂರ್ತಿಯಾಗಿ ಹೋಗುವುದನ್ನು ತಪ್ಪಿಸಿದರು ಎಂದು ನ್ಯಾ.ಮಂಜುನಾಥ್ ಆಪಾದಿಸಿದರು.

ನನ್ನ ವಿರುದ್ಧ ನಡೆಸಲಾದ ಈ ಸಂಚಿನಲ್ಲಿ ತಮಿಳುನಾಡು ವಕೀಲರೂ ಭಾಗಿಯಾಗಿದ್ದಾರೆ. ನಾನು ನ್ಯಾಯ ಮೂರ್ತಿಯಾಗಿ ನಿರ್ಗಮಿಸುತ್ತಿರುವ ಈ ಸಂದರ್ಭದಲ್ಲಿ, ಓ ದೇವರೇ ನನ್ನನ್ನು ದ್ವೇಷಿಸುವವರನ್ನು ಕ್ಷಮಿಸಿಬಿಡು ಎಂದು ಕೇಳಿಕೊಳ್ಳುತ್ತೇನೆ' ಎಂದರು.

ಸಮಾರಂಭದಲ್ಲಿ ಹಿರಿಯ ನ್ಯಾಯಮೂರ್ತಿಗಳು ಕೆ. ಎಲ್.ಮಂಜುನಾಥ್ ಕುಟುಂಬ ಸದಸ್ಯರು, ವಕೀಲ ಪರಿಷತ್‍ನ ಅಧ್ಯಕ್ಷ ಪಿ.ಪಿ.ಹೆಗ್ಡೆ, ವಕೀಲ ಸಂಘದ ಅಧ್ಯಕ್ಷ ಎಚ್.ಸಿ.ಶಿವರಾಮು ಭಾಗವಹಿಸಿದ್ದರು.

ಇನ್ನೊಂದು ಜನ್ಮವಿದ್ದರೆ ನ್ಯಾಯಮೂರ್ತಿ ಆಗುವುದೇ ಇಲ್ಲ, ವಕೀಲನಾಗೇ ಇರ್ತೇನೆ
ಬೆಂಗಳೂರು:
ನನಗೆ ಮತ್ತೊಂದು ಜನ್ಮ ಎಂದಿದ್ದರೆ ಆ ಜನ್ಮದಲ್ಲೂ ನಾನು ವಕೀಲನಾಗಲು ಬಯಸುತ್ತೇನೆ. ಯಾವುದೇ ಕಾರಣಕ್ಕೂ ನ್ಯಾಯಮೂರ್ತಿ ಆಗುವುದಿಲ್ಲ ಎಂದು ನಿವೃತ್ತ ನ್ಯಾ. ಕೆ.ಎಲ್.ಮಂಜುನಾಥ್ ಹೇಳಿದರು.

ಬೆಂಗಳೂರು ವಕೀಲರ ಸಂಘದಿಂದ ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಏರ್ಪಡಿಸಿದ್ದ `ನಿವೃತ್ತ ನ್ಯಾ. ಕೆ.ಎಲ್.ಮಂಜುನಾಥ್' ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮುಂದಿನ ಜನ್ಮ ಎಂದಿದ್ದರೆ ಅಲ್ಲಿ ನಾನು ಖಂಡಿತ ನ್ಯಾಯಮೂರ್ತಿ ಆಗುವುದಿಲ್ಲ. ಅಷ್ಟೇ ಅಲ್ಲ ನನ್ನ ಮಕ್ಕಳನ್ನೂ ನ್ಯಾಯಾಧೀಶರನ್ನಾಗಿ ಮಾಡಲು ಮನಸ್ಸು ಒಪ್ಪುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಮೂಲಕ ವ್ಯವಸ್ಥೆ ವಿರುದ್ಧ ಹಾಗೂ ಅಲ್ಲಿನ ಒಳರಾಜಕೀಯದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.

ನನ್ನ ವಿರುದ್ಧ ಯಾವುದೇ ಆರೋಪ ಬಂದರೂ ಅದಕ್ಕೆ ನಾನು ಜಗ್ಗುವುದಿಲ್ಲ. ಈ ಸಂಬಂಧ ಸಿಬಿಐಗಲ್ಲ ಎಲ್ಲಿಗೇ ದೂರು ನೀಡಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಸುಪ್ರೀಂನ ನ್ಯಾಯಾಧೀಶನಾಗುವ ಅವಕಾಶವನ್ನು ನಮ್ಮವರೇ ಕೈ ತಪ್ಪುವಂತೆ ಮಾಡಿದರು. ಆದರೆ, ಅದಕ್ಕೆ ನನಗೆ ಬೇಸರವಿಲ್ಲ. ನಿಮ್ಮ ಪ್ರೀತಿ ವಿಶ್ವಾಸ ಅದಕ್ಕಿಂತ ದೊಡ್ಡದು ಎಂದರು.

ವಕೀಲರ ಸಂಘಕ್ಕಾಗಿ, ನಾನು ಸಾಕಷ್ಟು ಕೆಲಸ ಮಾಡಿದರೂ ಸಹ ಅವರೇ ನನ್ನನ್ನು ಕೋಮು ವಾದಿಯಂತೆ ಬಿಂಬಿಸಿದರು. ನಮ್ಮ ವಕೀಲರಿಗಾಗಿ ನಾನು `ವಕೀಲ ಕೋಮುವಾದಿ'ಯಾಗುತ್ತೇನೆ. ಅದಕ್ಕೆ ನನಗೆ ಸಂತಸವಿದೆ. ಇಲ್ಲಿನ ಬಾರ್ ಕೌನ್ಸಿಲ್ ಕಟ್ಟುವಲ್ಲಿ ಯಾರೆಲ್ಲ ಎಷ್ಟು ಶ್ರಮಪಟ್ಟರು ಎಂಬುದು ನನ್ನನ್ನು ಹೊರತುಪಡಿಸಿದರೆ ಕೆಲವು ಹಿರಿಯ ಅಧಿಕಾರಿಗಳಿಗೆ ಮಾತ್ರ ಗೊತ್ತು. ಇದರಿಂದ ತನಗೆ ನೋವಾಗಿದ್ದರೂ ಎಂದಿಗೂ ನನ್ನ ಜನಕ್ಕಾಗಿ ಶ್ರಮಿಸುತ್ತೇನೆ ಎಂದರು.

ಇದೇ ವೇಳೆ ಮಾತನಾಡಿದ ಹೈಕೋರ್ಟ್‍ನ ಮುಖ್ಯ ನ್ಯಾ. ಡಿ.ಎಚ್.ವಘೇಲ ಅವರು `ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸುವ ವೇಳೆ ಎಲ್ಲರೂ ತಮ್ಮ ಜೊತೆಯಲ್ಲಿ ಇರುತ್ತಾರೆ. ಆದರೆ, ನಿವೃತ್ತಿ ವೇಳೆ ಯಾರೂ ಇರುವುದಿಲ್ಲ. ಮಂಜು ನಾಥ್ ಅವರ ನಿವೃತ್ತಿ ವೇಳೆ ಇಷ್ಟೊಂದು ಜನ ಸೇರಿದ್ದಾರೆ ಎಂದರೆ ಅದು ಅವರ ದಕ್ಷತೆಯನ್ನು ಬಿಂಬಿಸುತ್ತದೆ. ವಕೀಲರು ಉತ್ತಮ ಸೇವೆ ಸಲ್ಲಿಸಿದರೆ ಜನ ಅವರನ್ನು ಎಂದೂ ಮರೆಯುವುದಿಲ್ಲ ಎಂಬುದಕ್ಕೆ ಇವರೇ ಸಾಕ್ಷಿ' ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement