ಹೈದರಾಬಾದ್: ದುಬೈನಿಂದ ಹಿಂದಿರುಗುತ್ತಿದ್ದ ಹೈದರಾಬಾದ್ ನಿವಾಸಿಯೊಬ್ಬ ಗಗನಸಖಿಯಿಂದ ಆಕರ್ಷಿತನಾಗಿ, ಅವಳನ್ನು ಗೆಲ್ಲಲು "ಹೈಜಾಕ್" ಎಂದು ಕೂಗಿ ಪೊಲೀಸ್ ಬಂಧನಕ್ಕೆ ಒಳಗಾದ ಘಟನೆ ನಡೆದಿದೆ.
ಮೆಹ್ದಿಪಟ್ನಮ್ ನಿವಾಸಿ ಯೂಸುಫ್ ಶರೀಫ್ (೩೫) ಕಳೆದ ಮೂರು ವರ್ಷಗಳಿಂದ ದುಬೈನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು ಮಂಗಳವಾರ ಏರ್ ಇಂಡಿಯಾ ವಿಮಾನದಲ್ಲಿ ಹೈದರಾಬಾದಿಗೆ ಹಿಂದಿರುಗುತ್ತಿದ್ದ.
ಅವನು ಗಗನಸಖಿಯನ್ನು ಫೋಟೋಗಾಗಿ ಕಾಕ್ಪಿಟ್ ಒಳಗೆ ಕರೆದುಕೊಂಡುಹೋಗುವಂತೆ ಹೇಳಿದ್ದಾನೆ. ನಂತರ ತನ್ನ ಜೊತೆ ಸೆಲ್ಫಿಗೆ ಪೋಸ್ ನೀಡಲು ಹೇಳಿದ್ದಾನೆ. ಹಾಗೆಯೇ ಪ್ರತಿ ಬಾರಿಯೂ ಆ ಗಗನಸಖಿಗೆ ತಂಪು ಪಾನೀಯಕ್ಕೋ, ತಿಂಡಿಗೋ ತನ್ನ ಸೇವೆಯನ್ನೇ ಮಾಡುತ್ತಿರುವಂತೆ ನೋಡಿಕೊಂಡಿದ್ದಾನೆ. "ಅವಳನ್ನು ಸೆಳೆಯಲು ಲಲ್ಲೆ ಹೊಡೆಯುತ್ತಿರುವಾಗ, ಹಾಗೂ ಕಥೆಗಳನ್ನು ಹೇಳುವಾಗ ಎಲ್ಲೋ ಒಂದು ಕಡೆ ಹೈಜ್ಯಾಕ್ ಪದವನ್ನು ಬಳಸಿದ್ದಾನೆ. ಇದರಿಂದ ಎಚ್ಚರಗೊಂಡ ಗಗನಸಖಿ ತನ್ನ ಮೇಲ್ವಿಚಾರಕರಿಗೆ ಈ ವಿಷಯ ತಿಳಿಸಿದ್ದು, ವಿಮಾನ ಭೂಸ್ಪರ್ಷಿಸಿದ ನಂತರ ಪೊಲೀಸರು ಯೂಸಫ್ನನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ" ಎಂದು ಶಂಸಾಬಾದ್ ಇನ್ಸ್ಪೆಕ್ಟರ್ ಟಿ ಸುಧಾಕರ್ ತಿಳಿಸಿದ್ದಾರೆ.
ಗಗನಸಖಿಯನ್ನು ತಮಾಷೆಗಾಗಿ ಹೆದರಿಸುತ್ತಿದ್ದೆ ಎಂದು ಯೂಸಫ್ ನಿವೇದಿಸಿಕೊಂಡಿದ್ದರೂ ಪೊಲೀಸರು ಅವನ ವಿವರಗಳನ್ನು ತನಿಖೆ ಮಾಡಿ ಮಹಿಳೆಯನ್ನು ಬೆದರಿಸಿದ್ದಕ್ಕೆ ಕೇಸು ದಾಖಲಿಸಿದ್ದಾರೆ.
ಯೂಸೂಫ್ ಮಾನಸಿಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಎಂಬ ವರದಿಗಳು ಚಾಲ್ತಿಯಲ್ಲಿದ್ದು, ಇದನ್ನು ತಳ್ಳಿಹಾಕಿರುವ ಪೊಲೀಸರು "ಈ ಘಟನೆಯಲ್ಲಿ ಗಂಭೀರವಾದದ್ದು ಏನಿಲ್ಲ" ಎಂದಿದ್ದಾರೆ.
"ಅವರು ಸ್ಥಿರವಾಗಿದ್ದಾರೆ. ತಮ್ಮ ಸಂಭಾಷಣೆಯನ್ನು ಲಂಗು ಲಗಾಮಿಲ್ಲದೆ ಹರಿದುಬಿಟ್ಟು ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅದು ತಮಾಷೆ ಎಂದು ಅವರು ಹೇಳಿದ್ದರೂ ನಾವು ತನಿಖೆ ನಡೆಸುತ್ತಿದ್ದೇವೆ" ಎಂದು ಶಂಸಾಬಾದಿನ ಉಪ ಪೋಲಿಸ್ ಆಯುಕ್ತ ಎ ಆರ್ ಶ್ರೀನಿವಾಸ್ ತಿಳಿಸಿದ್ದಾರೆ.