ಪ್ರಧಾನ ಸುದ್ದಿ

ಡಿ.ಕೆ. ನಿಗೂಢ ಸಾವು: ತನಿಖೆ ಆರಂಭಿಸಿದ ಸಿಬಿಐ ಅಧಿಕಾರಿಗಳು

Lingaraj Badiger

ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ತನಿಖೆ ಆರಂಭಿಸಿರುವ ಕೇಂದ್ರ ತನಿಖಾ ದಳ(ಸಿಬಿಐ)ದ ಅಧಿಕಾರಿಗಳು ಗುರುವಾರ ವಿಧಾನಸೌಧಕ್ಕೆ ತೆರಳಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಹಾಗೂ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಪಟ್ನಾಯಕ್ ಅವರನ್ನು ಭೇಟಿ ಮಾಹಿತಿ ಸಂಗ್ರಹಿಸಿದರು. ಅಲ್ಲದೆ ರವಿ ಅವರ ಮಾವ ಹನುಮಂತರಾಯಪ್ಪ ಅವರೊಂದಿಗೂ ಸಿಬಿಐ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ.

ಸಿಬಿಐ ಜಂಟಿ ನಿರ್ದೇಶಕ ನೀನಾಸಿಂಗ್ ಮಾರ್ಗದರ್ಶನದಲ್ಲಿ ತನಿಖೆ ನಡೆಸುತ್ತಿರುವ ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಹಾಗೂ ಅಧಿಕಾರಿಗಳ ತಂಡ ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಭೇಟಿ ಮಾಡಿ ಕೆಲ ಕಾಲ ಮಾತುಕತೆ ನಡೆಸಿದರು.

ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಡಿ.ಕೆ.ರವಿ ವಿರುದ್ಧ ನೀಡಿದ್ದರು ಎನ್ನಲಾದ ದೂರು ಹಾಗೂ ರವಿ ಸಾವಿನ ನಂತರ ಅಧಿಕಾರಿ ಬರೆದುಕೊಟ್ಟಿದ್ದಾರೆ ಎನ್ನಲಾದ ಪತ್ರದ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.

ತನಿಖೆಗೆ ನೆರವು ಹಾಗೂ ಕಾರು, ಕಚೇರಿ ಸೇರಿ ಇತರೆ ಅಗತ್ಯ ಸೌಲಭ್ಯ ಒದಗಿಸುವಂತೆಯೂ ಮನವಿ ಮಾಡಿದ್ದು, ಕೌಶಿಕ್ ಮುಖರ್ಜಿ ಅವರು ಬೇಕಾದ ವ್ಯವಸ್ಥೆ ಕಲ್ಪಿಸಲು ಕ್ರಮ ತೆಗೆದುಕೊಳ್ಳುವಂತೆ ಪಟ್ನಾಯಕ್ ಅವರಿಗೆ ಸೂಚಿಸಿದ್ದಾರೆ.

ಈಗಾಗಲೇ ಡಿ.ಕೆ.ರವಿ ಅವರ ಕಾರು ಚಾಲಕನನ್ನು ವಿಚಾರಣೆಗೆ ಒಳಪಡಿಸಿ ಘಟನಾ ದಿನ ಹಾಗೂ ಅದಕ್ಕೂ ಹಿಂದಿನ ಬೆಳವಣಿಗೆಗಳ ಕುರಿತು ಅಧಿಕಾರಿಗಳು
ಮಾಹಿತಿ ಪಡೆದಿದ್ದು, ರವಿ ಅವರ ಮಾವನನ್ನು ಭೇಟಿ ಮಾಡಿ ಮತ್ತಷ್ಟು ಮಾಹಿತಿ ಸಂಗ್ರಹಿಸಲಿದ್ದಾರೆ.

SCROLL FOR NEXT