ನವದೆಹಲಿ: ಭೂಕಂಪನದಿಂದ ತತ್ತರಿಸಿರುವ ನೇಪಾಳದಲ್ಲಿ ಸಿಲುಕಿದ್ದ ಸುಮಾರು ೪೩ ಸಾವಿರ ಭಾರತೀಯರನ್ನು ರಸ್ತೆ ಮಾರ್ಗವಾಗಿ ರಕ್ಷಿಸಿ ಕರೆತರಲಾಗಿದೆ ಎಂದು ಸಶಸ್ತ್ರ ಸೀಮಾ ಬಲ್ ನ ಎ ಡಿ ಜಿ ಸೋಮೇಶ್ ಗೋಯಲ್ ತಿಳಿಸಿದ್ದಾರೆ.
ಭಾರತೀಯರು, ವಿದೇಶಿಯರು ಹಾಗೂ ಗಾಯಗೊಂಡವರನ್ನು ಹೊತ್ತ ಒಟ್ಟು ೬೮೫ ವಾಹನಗಳು ಬಂದು ತಲುಪಿದ್ದು, ಸೇನಾ ಪಡೆ ಸ್ಥಾಪಿಸಿರುವ ಶಿಬಿರದಲ್ಲಿ ಗಾಯಗೊಂಡವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಈ ದೊಡ್ಡ ಕಾರ್ಯಾಚರಣೆಯಲ್ಲಿ ೩೪೧ ಜನ ವಿದೇಶಿಯರಿಗೆ ತಾತ್ಕಾಲಿಕ ವೀಸಾ ನೀಡಿ ರಕ್ಷಿಸಲಾಗಿದೆ. "ಪರಿಹಾರ ಸಾಮಗ್ರಿಗಳನ್ನು ಹೊತ್ತ ೬೭ ಟ್ರಕ್ಕುಗಳನ್ನು ಭೂಕಂಪನ ಪೀಡಿತ ನೇಪಾಳ ಪ್ರದೇಶಗಳಿಗೆ ಬುಧವಾರ ಕಳುಹಿಸಲಾಗಿದೆ. ಇಲ್ಲಿಯವರಗೂ ೪೩೫೭೫ ಜನರನ್ನು ರಕ್ಷಿಸಲಾಗಿದೆ. ಸುಮಾರು ೨೦೦೦ ಜನಕ್ಕೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿತ್ತು ಮತ್ತು ಗಾಯಗೊಂಡ ೨೭ ಜನರನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ" ಎಂದು ಗೋಯಲ್ ತಿಳಿಸಿದ್ದಾರೆ.
೧೬ ಎನ್ ಡಿ ಆರ್ ಎಫ್ ತಂಡಗಳು, ೧೮ ಸ್ನಿಫ್ಫರ್ ನಾಯಿಗಳೊಂದಿಗೆ ಬುಧವಾರ ೩೦ ದೇಹಗಳನ್ನು ಪತ್ತೆ ಹಚ್ಚಿದೆ. ಇಲ್ಲಿಯವರೆಗೂ ೧೧೫ ಮೃತದೇಹಗಳನ್ನು ದೇಹಗಳನ್ನು ಪತ್ತೆಹಚ್ಚಿದೆ.
ಈ ಮಧ್ಯೆ ಭಾರತೀಯ ರಕ್ಷಣಾ ದಳಗಳಿಂದ ೧೦೫೨ ಜನ ನೇಪಾಳಿಗಳನ್ನು ರಕ್ಷಿಸಿ ಸೇನಾ ಆಸ್ಪತ್ರೆಗಳಿಗೆ ಸೇರಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿಗೆ ತಿಳಿಸಲಾಗಿದೆ. ೧೯ ವಿದೇಶಿ ಪರ್ವತಾರೋಹಿಗಳನ್ನು ಒಳಗೊಂಡಂತೆ ೧೫೨ ಪ್ರವಾಸಿಗರನ್ನು ರಕ್ಷಿಸಲಾಗಿದೆ.
ವಿಮಾನದ ಮೂಲಕ ಒಟ್ಟು ೯೫೦೯ ಜನರನ್ನು ರಕ್ಷಿಸಲಾಗಿದ್ದು, ೭೮೫ ವಿದೇಶಿಯರಿಗೆ ಟ್ರಾನ್ಸಿಟ್ ವೀಸಾ ನೀಡಲಾಗಿದೆ.