ಬೆಂಗಳೂರು: ಲೋಕಾಯುಕ್ತ ಭ್ರಷ್ಟಾಚಾರದ ಮತ್ತೊಬ್ಬ ಆರೋಪಿ ಭಾಸ್ಕರ್‍ನ ಪತ್ತೆಗೆ ಎಸ್‍ಐಟಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಆತನಿಗಾಗಿ ಹೊರರಾಜ್ಯಗಳಲ್ಲೂ ಶೋಧ ನಡೆಸುತ್ತಿದ್ದಾರೆ. ಆದರೂ ಆತ ಎಲ್ಲಿದ್ದಾನೆ ಎಂಬ ಬಗ್ಗೆ ಪೊಲೀಸರಿಗೆ ಸಣ್ಣ ಸುಳಿವೂ ಸಿಕ್ಕಿಲ್ಲ.
ಹಾಗಾಗಿ ಹೊರರಾಜ್ಯಗಳಲ್ಲಿ ಭಾಸ್ಕರ್ ಹುಡುಕಾಟ ನಡೆಸುತ್ತಿರುವ ಪೊಲೀಸರು ಬಂದ ದಾರಿಗೆ ಸುಂಕವಿಲ್ಲ ಎಂದು ಬರಿಗೈಲಿ ಹಿಂತಿರುಗುತಿದ್ದಾರೆ ಎನ್ನಲಾಗಿದೆ. ಹಿಂದೆ ಆತ ಹಲವು ಮೊಬೈಲ್ ಸಿಮ್ ಕಾರ್ಡ್ ಬಳಸಿದ್ದರೂ ಸದ್ಯ ಯಾವ ಸಿಮ್ ಕಾರ್ಡ್‍ನ್ನೂ ಬಳಸುತ್ತಿಲ್ಲ. ಈ ಹಿಂದೆ ಆ ಸಿಮ್ನಿಂದ ಹೊರ ಹೋಗಿರುವ ಹಾಗೂ ಒಳಬಂದಿರುವ ಕರೆಗಳನ್ನು ತಪಾಸಣೆ ನಡೆಸಿದ ಪೊಲೀಸರು ಆ ಸ್ಥಳಗಳಿಗೆ ಹೋಗಿ ಬರಿಗೈಲಿ ವಾಪಾಸಾಗಿದ್ದಾರೆ.
ಆರೋಪಿಯು ತಾನು ಒಂದು ಸಿಮ್ ಬಳಸಿದ ನಂತರ ಮತ್ತೆ ಅದನ್ನು ಬಳಸಿಲ್ಲ. ಬೇರೆಯವರ ಮೊಬೈಲ್ ಫೋನ್‍ಗಳಿಂದ ಹಾಗೂ ಸಾರ್ವಜನಿಕ ಟೆಲಿಫೋನ್ ಬೂತ್‍ಗಳಿಂದ ತನಗೆ ಬೇಕಾದವರಿಗೆ ಕರೆ ಮಾಡುತ್ತಿದ್ದಾನೆ. ಕರೆ ಮಾಡಿ ನಂತರ ಅಲ್ಲಿಂದ ಜಾಗ ಬದಲಿಸುತ್ತಿದ್ದಾನೆ. ಹಾಗಾಗಿ ಪೊಲೀಸರಿಗೆ ಆತ ಎಲ್ಲಿ ಅಡಗಿದ್ದಾನೆ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.