ಪ್ರಧಾನ ಸುದ್ದಿ

ಮಧ್ಯ ಪ್ರದೇಶದಲ್ಲಿ ಅವಳಿ ರೈಲು ಅಪಘಾತ: 24 ಸಾವು

Rashmi Kasaragodu

ಮಧ್ಯಪ್ರದೇಶ: ಮುಂಬೈಯಿಂದ ಉತ್ತರ ಪ್ರದೇಶದ ವಾರಣಾಸಿಗೆ ಬರುತ್ತಿದ್ದ ಕಾಮಯಾನಿ ಎಕ್ಸ್ ಪ್ರೆಸ್ ಮಂಗಳವಾರ ಮಧ್ಯರಾತ್ರಿ ಮಧ್ಯಪ್ರದೇಶದ ಪುಟ್ಟ ಸೇತುವೆಯನ್ನು ದಾಟುವಾಗ ಹಳ್ಳಿ ತಪ್ಪಿ ಅಪಘಾತ ಸಂಭವಿಸಿದೆ. ಈ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಪಾಟ್ನಾದಿಂದ ಮುಂಬೈಗೆ ಬರುತ್ತಿದ್ದ ಜನತಾ ಎಕ್ಸ್‌ಪ್ರೆಸ್ (13201) ರೈಲು ಅದೇ ಜಾಗದಲ್ಲಿ ಹಳಿ ತಪ್ಪಿ ಇನ್ನೊಂದು ದುರ್ಘಟನೆ ಸಂಭವಿಸಿದೆ. ಈ ಎರಡೂ ಅಪಘಾತಗಳಲ್ಲಿ ಒಟ್ಟು 24 ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

ಇಲ್ಲಿನ ಭೈರಂಗೀ ಮತ್ತು ಖೈರಾಕಿಯಾ ರೈಲ್ವೇ ನಿಲ್ದಾಣಗಳ ನಡುವೆ, ಹರ್ದಾದಿಂದ 18 ಕಿಮೀ ದೂರದಲ್ಲಿರುವ ಕುದ್ವಾ ಎಂಬಲ್ಲಿ ಅವಳಿ ರೈಲು ಅಪಘಾತ ಸಂಭವಿಸಿದ್ದು, ರಕ್ಷಣಾ ಕಾರ್ಯಚರಣೆ ಮುಂದುವರಿದಿದೆ.

ಸಾವಿಗೀಡಾದವರಲ್ಲಿ 10 ಮಹಿಳೆಯರು, 5 ಮಕ್ಕಳು ಹಾಗೂ 9 ಗಂಡಸರಿದ್ದಾರೆ. ಒಟ್ಟು 27 ಮಂದಿ ಸಾವಿಗೀಡಾಗಿರುವ ಶಂಕೆ ಇದೆ ಎಂದು ಪೊಲೀಸರು ಹೇಳಿದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ.

ಮಧ್ಯರಾತ್ರಿಯಾಗಿರುವ ಕಾರಣ ಕಗ್ಗತ್ತಲು ಇನ್ನೊಂದು ಕಡೆ ಮಳೆಯಿಂದಾಗಿ ಸುತ್ತಲಿನ ಪ್ರದೇಶಗಳು ನೀರಿನಿಂದಾವೃತವಾಗಿದ್ದವು. ಹಾಗಾಗಿ ರಕ್ಷಣಾ ಕಾರ್ಯಾಚರಣೆಗೂ ಅಡಚಣೆಯುಂಟಾಗಿದೆ. ರಕ್ಷಣಾ ಕಾರ್ಯಗಳಿಗಾಗಿ ಇದೀಗ ಸೇನಾಪಡೆ ಧಾವಿಸಿದೆ.

ರೈಲು ಅಪಘಾತ ಸಂಭವಿಸುವುದಕ್ಕೆ ನಿರ್ದಿಷ್ಟ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಆದರೆ  ಕಳೆದ ಕೆಲವು ದಿನಗಳಿಂದ ಇಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಇದರಿಂದಾಗಿ ರೈಲು ಹಳಿಗೆ ಹಾನಿಯುಂಟಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪ್ರಸ್ತುತ ಅಪಘಾತದ ಬಗ್ಗೆ  ತನಿಖೆ ನಡೆಸಲು ರೈಲ್ವೇ ಇಲಾಖೆ ಆದೇಶಿಸಿದೆ.

ಸಹಾಯವಾಣಿ ಸಂಖ್ಯೆ

ಹರ್ದಾ  - 9752460088
ಇತಾರಸಿ - 07572- 241920
ಭೋಪಾಲ್- 0755-4001609
ಬಿನಾ- 07572-241920


SCROLL FOR NEXT