ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಲೋಕಾಯುಕ್ತ ಪಿಆರ್‌ಒ, ಜಂಟಿ ಆಯುಕ್ತ ಸೈಯ್ಯದ್ ರಿಯಾಜ್ ಅವರನ್ನು ಬುಧವಾರ ಲೋಕಾಯುಕ್ತ ವಿಶೇಷ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ವಿಶೇಷ ತನಿಖಾ ತಂಡ(ಎಸ್‌ಐಟಿ)ದ ವಶದಲ್ಲಿದ್ದ ಆರೋಪಿ ರಿಯಾಜ್ ಅವರನ್ನು ಇಂದು ಲೋಕಾಯುಕ್ತ ಕೋರ್ಟ್‌ಗೆ ಹಾಜರುಪಡಿಸಿದ ಎಸ್‌ಐಟಿ ಅಧಿಕಾರಿಗಳು, ಹೆಚ್ಚಿನ ವಿಚಾರಣೆಗಾಗಿ ಮತ್ತೆ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಆದರೆ ಇದಕ್ಕೆ ಒಪ್ಪದ ಕೋರ್ಟ್, ನ್ಯಾಯಾಂಗ ಬಂಧನದಲ್ಲೇ ರಿಯಾಜ್ ಅವರನ್ನು ಪ್ರಶ್ನಿಸಲು ಅವಕಾಶ ನೀಡಿ, ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಕಳೆದ ಜುಲೈ 27ರಂದು ರಿಯಾಜ್ ಅವರನ್ನು ಬಂಧಿಸಿದ್ದ ಎಸ್‌ಐಟಿ ಮುಖ್ಯ ತನಿಖಾಧಿಕಾರಿ ಲಾಬೂರಾಮ್ ನೇತೃತ್ವದ ತಂಡ, ವಿಶೇಷ ನ್ಯಾಯಾಲಯದ ಮುಂದೆ ಹಾಜರು ಪಡಿಸಿ, 12 ದಿನಗಳ ಕಾಲ ತಮ್ಮ 12 ವಶಕ್ಕೆ ಪಡೆದಿದ್ದರು.