ನವದೆಹಲಿ: ೨೫ ಜನ ಕಾಂಗ್ರೆಸ್ ಸಂಸದರನ್ನು ಲೋಕಸಭಾ ಸ್ಪೀಕರ್ ಸುಮಿತ್ರ ಮಹಾಜನ್ ಅಮಾನತು ಮಾಡಿರುವುದರ ಬಗ್ಗೆ ಅಸಮಧಾನ ಇದೆ ಎಂದು ಬಿಜೆಪಿ ಮುಖಂಡನಾಗಿರುವ ನಟ ಶತ್ರುಘನ್ ಸಿನ್ಹ ಹೇಳಿದ್ದಾರೆ.
"ಲೋಕಸಭೆಯ ಕಲಾಪದಲ್ಲಿ ಇರದ ಒಬ್ಬರನ್ನು ಸೇರಿದಂತೆ ಕಾಂಗ್ರೆಸ್ಸಿನ ೨೫ ಸಂಸದರನ್ನು ಅಮಾನತು ಮಾಡಿರುವ ಬೆಳವಣಿಗೆಯಿಂದ ಅಸಮಾಧಾನವಾಗಿದೆ" ಎಂದು ಸಿನ್ಹ ಟ್ವೀಟ್ ಮಾಡಿದ್ದಾರೆ.
"ಈಗ ಅಥವಾ ಮುಂದೆ ಒಳ್ಳೆಯ ಚಿಂತನೆ ಉಳಿಯಬೇಕು" ಎಂದು ಕೂಡ ಅವರು ಹೇಳಿದ್ದಾರೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ರಾಜೀನಾಮೆ ಕೋರಿ ಕಾಂಗ್ರೆಸ್ ಪಕ್ಷ ಸಂಸತ್ ಕಲಾಪಗಳಿಗೆ ಅಡ್ಡಿಪಡಿಸಿತ್ತು. ಇದನ್ನು ಸರ್ಕಾರ ತಿರಸ್ಕರಿಸಿತ್ತು.
"ಬೇಕಂತಲೇ ಸದನದ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ" ಎಂದು ದೂರಿ ಸೋಮವಾರ ಐದು ದಿನಗಳವರೆಗೆ ೨೫ ಕಾಂಗ್ರೆಸ್ ಸಂಸದರನ್ನು ಸ್ಪೀಕರ್ ಅಮಾನತುಗೊಳಿಸಿದ್ದರು. ಕಾಂಗ್ರೆಸ್ ಈ ಅಮಾನತಿನ ವಿರುದ್ಧ ಇತರ ಪಕ್ಷಗಳೊಂದಿಗೆ ಸಂಸತ್ ಆವರಣದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದೆ.