ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಅವರನ್ನು ಲೋಕಾಯುಕ್ತ ವಿಶೇಷ ಕೋರ್ಟ್ ಆಗಸ್ಟ್ 17ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ವಿಶೇಷ ತನಿಖಾ ತಂಡ(ಎಸ್‌ಐಟಿ)ದ ವಶದಲ್ಲಿದ್ದ ಅಶ್ವಿನ್ ರಾವ್ ಅವರ ಪೊಲೀಸ್ ಕಸ್ಟಡಿ ಅವರಧಿ ಇಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ, ಅಧಿಕಾರಿಗಳು ಇಂದು ಮಧ್ಯಾಹ್ನ ಲೋಕಾಯುಕ್ತ ವಿಶೇಷ ಕೋರ್ಟ್‌ಗೆ ಹಾಜರು ಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ ಆರೋಪಿಯನ್ನು 10 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ವಿಚಾರಣೆ ವೇಳೆ, ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡುವಂತೆ ಅಶ್ವಿನ್ ರಾವ್ ಮನವಿ ಮಾಡಿದರು. ಆದರೆ ಆರೋಪಿ ಮನವಿಯನ್ನು ತಿರಸ್ಕರಿಸಿದ ಕೋರ್ಟ್, ವಿಶೇಷ ಸೌಲಭ್ಯ ನೀಡುವುದು ಜೈಲು ಅಧಿಕಾರಿಗಳಿಗೆ ಬಿಟ್ಟಿದ್ದು ಎಂದು ಅಭಿಪ್ರಾಯ ಪಟ್ಟಿದೆ.
ಇನ್ನು ಜಾಮೀನು ಕೋರಿ ಅಶ್ವಿನ್ ರಾವ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಆಗಸ್ಟ್ 10ರಂದು ನಡೆಯಲಿದೆ.