ಚೆನ್ನೈ: ಸಂಸತ್ತಿನಲ್ಲಿ ಭೂಸ್ವಾಧೀನ ಮಸೂದೆ ಸೇರಿದಂತೆ ಪ್ರಮುಖ ವಿಧೇಯಕಗಳಿಗೆ ಅಂಗೀಕಾರ ಪಡೆಯುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು, ಶುಕ್ರವಾರ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರನ್ನು ಅವರ ಪೋಯಸ್ ಗಾರ್ಡನ್ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.
ಇಂದು ಬೆಳಗ್ಗೆ ಮದ್ರಾಸ್ ವಿವಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಉದ್ಘಾಟಿಸಿದರು. ಈ ವೇಳೆ ಜಯಲಲಿತಾ ಅವರು ಹಾಜರಿರಲಿಲ್ಲ. ಆದರೆ ಪ್ರಧಾನಿಯನ್ನು ಖುದ್ದು ವಿಮಾನ ನಿಲ್ದಾಣಕ್ಕೆ ತೆರಳಿ ಪ್ರಧಾನಿಯನ್ನು ಸ್ವಾಗತಿಸಿದರು.
ಕಾರ್ಯಕ್ರಮದ ನಂತರ ಮೋದಿ ನೇರವಾಗಿ ಜಯಲಲಿತಾ ಅವರ ನಿವಾಸಕ್ಕೆ ತೆರಳಿ, ಮಾತುಕತೆ ನಡೆಸಿದರು. ಈ ವೇಳೆ, ಜಯಲಲಿತಾ ಅವರು ಕಾವೇರಿ ನದಿ ನೀರು ಹಂಚಿಕೆ ಸೇರಿದಂತೆ ಹಲವು ಅಂತರಾಜ್ಯ ವಿವಾದಗಳ ಬಗ್ಗೆ ಪ್ರಧಾನಿಯೊಂದಿಗೆ ಚರ್ಚಿಸಿದರು. ಅಲ್ಲದೆ ಕಾವೇರಿ ನದಿ ಪ್ರಾಧಿಕಾರ ರಚಿಸಿ, ರಾಜ್ಯದ ಹಕ್ಕುಗಳನ್ನು ಕಾಪಾಡುವಂತೆ ಜಯಾ ಮನವಿ ಮಾಡಿಕೊಂಡಿದ್ದಾರೆ.
ಇನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹತ್ವದ ಮಸೂದೆ ಪಾಸ್ ಆಗಬೇಕಾಗಿರುವುದರಿಂದ, ಅದರಲ್ಲೂ ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತ ಇಲ್ಲ. ಹೀಗಾಗಿ ಉಭಯ ಸದನಗಳಲ್ಲೂ ತಮ್ಮನ್ನು ಬೆಂಬಲಿಸುವಂತೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.