ಈ ಆಘಾತಕಾರಿ ಘಟನೆಯಲ್ಲಿ, ಹಾಡುಹಗಲಲ್ಲೇ ಪುರುಷನೊಬ್ಬ ಯುವತಿಯನ್ನು ಅಕ್ರಮವಾಗಿ ಚುಂಬಿಸುವಂತೆ ಬಲವಂತ ಮಾಡಿದ್ದು, ಇದರ ಬಗ್ಗೆ ದೆಹಲಿಯ ಸಬ್ ಇನ್ಸ್ಪೆಕ್ಟರ್ ಸಂಜೀವ್ ಕುಮಾರ್ ಅವರಿಗೆ ಮೂರು ಬಾರಿ ದೂರಿನ ಅರ್ಜಿ ನೀಡಿದ್ದರೂ ಅವರು ಅದನ್ನು ತಿರಸ್ಕರಿಸಿದ ಅಮಾನವೀಯ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.
ಕಾನೂನು ಪಾಲಕರ ಈ ಅಮಾನವೀಯ ಪ್ರತಿಕ್ರಿಯೆಯೆಯಿಂದ ಬೇಸತ್ತ ಸಂತ್ರಸ್ತೆಯ ಗೆಳತಿ ರಾಧಿಕಾ ಪಿ ಸಿಂಗ್ ಅವರು ಈ ಇಡೀ ಘಟನೆಯನ್ನು ಫೇಸ್ಬುಕ್ ಪುಟದಲ್ಲಿ ವಿವರಿಸಿ ಬರೆದಿದ್ದಾರೆ. ಅದರ ಸಾರಾಂಶ ಹೀಗಿದೆ. "ನಿಖಿಲ್ ಎಂಬ ಮಧ್ಯವಯಸ್ಕ ದೆಹಲಿಯ ಜನನಿಬಿಡ ಕಾನಾಟ್ ಪ್ಲೇಸ್ ಪ್ರದೇಶದಲ್ಲಿ, ಯುವತಿಯೊಬ್ಬಳನ್ನು ಅಕ್ರಮವಾಗಿ ಚುಂಬಿಸುವಂತೆ ಪೀಡಿಸಿದ್ದಾನೆ. ಇದರಿಂದ ಕುಪಿತಗೊಂಡ ಯುವತಿ ಅವನನ್ನು ಹಿಡಿದು ಕಿರುಚಾಡಿದಾಗ, ಅಲ್ಲಿ ನೆರೆದ ಜನ ನಿಖಿಲ್ ನನ್ನು ಹಿಡಿದಿದ್ದಾರೆ. ನಂತರ ಪೊಲೀಸರಿಗೆ ಕರೆ ನೀಡಿದ ಹಿನ್ನಲೆಯಲ್ಲಿ, ಸ್ಥಳಕ್ಕೆ ಧಾವಿಸಿದ ಪೊಲೀಸರು ನಿಖಿಲ್ ನನ್ನು ವಶಕ್ಕೆ ಪಡೆದು ಜೀಪಿನಲ್ಲಿ ಕೂರಿಸಿ ವಿಚಾರಣೆ ನಡೆಸಿ, ನಂತರ ಯುವತಿಗೆ ದೂರು ಕೊಡಲು ಹೇಳಿದ್ದಾರೆ. ಯುವತಿ ಕೊಟ್ಟ ದೂರನ್ನು ಮೂರು ಬಾರಿ ನಿರಾಕರಿಸಿರುವ ಸಬ್ ಇನ್ಸ್ಪೆಕ್ಟರ್ ಸಂಜೀವ್ ಕುಮಾರ್, ಚುಂಬಿಸುವುದು ಲೈಂಗಿಕ ಹಿಂಸೆ ಅಲ್ಲ ಎಂದು ಹೇಳಿ ಆರೋಪಿಯನ್ನು ರಕ್ಷಿಸಲು ಪ್ರಯತ್ನಿಸಿರುವುದಲ್ಲದೆ, ಅಕ್ರಮವಾಗಿ ಸಂತ್ರಸ್ತೆಯ ದೂರವಾಣಿ ಸಂಖ್ಯೆಯನ್ನು ಆರೋಪಿಯ ಪೋಷಕರಿಗೆ ನೀಡಿದ್ದಾರೆ. ಆರೋಪಿಯ ಪೋಷಕರು ಸಂತ್ರಸ್ತೆಗೆ ಕರೆ ಮಾಡಿ ತಮ್ಮ ಮಗ ಮಾನಸಿಕ ಅಸ್ವಸ್ಥ ಇತ್ಯಾದಿಯಾಗಿ ಹೇಳಿದ್ದಾರೆ" ಎಂದು ಬರೆದಿರುವ ರಾಧಿಕಾ ಪೊಲೀಸರನ್ನು ಕರೆದದ್ದೇ ದೊಡ್ಡ ತಪ್ಪು ಎಂದು ಆಪಾದಿಸಿದ್ದಾರೆ.
ಹೀಗೆ ಫೇಸ್ಬುಕ್ಕಿನಲ್ಲಿ ಬರೆದಾಕ್ಷಣ ಎಲ್ಲವೂ ತಣ್ಣಗಾಗಿಲ್ಲ. ಇದಕ್ಕೆ ಶೀಘ್ರವಾಗಿ ಪ್ರತಿಕ್ರಿಯಿಸಿರುವ ಪೊಲೀಸರು ಸಂತ್ರಸ್ತೆಯ ಮನೆಗೆ ಹೊಕ್ಕಿ ಬೆದರಿಕೆ ಹಾಕಿ, ರಾಧಿಕಾ ಅವರು ಬರೆದಿರುವ ಪೋಸ್ಟ್ ತೆಗೆದು ಹಾಕುವಂತೆ ಒತ್ತಡ ತರಲು ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾರೆ. ಕೊನೆಗೂ ಒತ್ತಡಕ್ಕೆ ಮಣಿದು ಆ ಪೋಸ್ಟ್ ನ್ನು ರಾಧಿಕಾ ತೆಗೆದು ಹಾಕಿದ್ದರೂ, ಅಷ್ಟರಲ್ಲಿ ಈ ಪೋಸ್ಟ್ ವೈರಲ್ ಆಗಿದ್ದು ಬಹಳಷ್ಟು ಜನ ಇದನ್ನು ಉಳಿಸಿಕೊಂಡಿದ್ದಾರೆ. ಈ ಪೋಸ್ಟ್ ತೆಗೆದು ಹಾಕಿನ ನಂತರ, ಇದಕ್ಕೆ ಬಂದ ಒತ್ತಡಗಳನ್ನು, ಕಾರಣವನ್ನು ಮತ್ತೆ ರಾಧಿಕಾ ತಮ್ಮ ಫೇಸ್ಬುಕ್ ಪುಟದಲ್ಲಿ ವಿವರಿಸಿದ್ದಾರೆ.
ಯುವತಿಯರ ಮೇಲೆ ರೇಪ್, ಲೈಂಗಿಕ ದೌರ್ಜನ್ಯಕ್ಕೆ ದೆಹಲಿ ಕುಖ್ಯಾತಿ. ಈಗ ಈ ಘಟನೆ ದೆಹಲಿಯ ಸುರಕ್ಷತೆಯ ಬಗ್ಗೆ ಮತ್ತು ಕಾನೂನು ಪಾಲಕರ ಬಗ್ಗೆ ಹೆಚ್ಚಿನ ಪ್ರಶ್ನೆಗಳನ್ನು ಎತ್ತಿದೆ!