ಪ್ರಧಾನ ಸುದ್ದಿ

ಬಿಬಿಎಂಪಿ ಚುನಾವಣೆ: ಶುರುವಾಯ್ತು ಮತ ಬೇಟೆ

ಬೆಂಗಳೂರು: ನಾಮಪತ್ರ ಸಲ್ಲಿಕೆ ಪೂರ್ಣಗೊಂಡ ನಂತರ ಅಭ್ಯರ್ಥಿಗಳು ಪ್ರಚಾರ ಕಾರ್ಯದ ಮೂಲಕ ಮತದಾರರ ಬೇಟೆ ಆರಂಭಿಸಿದ್ದಾರೆ. ರಾಜಾಜಿನಗರ, ಓಕಳಿಪುರ, ಹನುಮಂತನಗರ, ಮಂಜುನಾಥನಗರ, ಲಕ್ಕಸಂದ್ರ ಸೇರಿದಂತೆ ಹಲವು ವಾಡ್ರ್ ಗಳಲ್ಲಿ ಈಗಾಗಲೇ ಪ್ರಚಾರ ಕಾರ್ಯ ಆರಂಭವಾಗಿದೆ. ಮನೆಮನೆಗೆ ತೆರಳಿ ಮತಯಾಚಿಸುತ್ತಿರುವ ಅಭ್ಯರ್ಥಿಗಳು, ಕಾರ್ಯಕರ್ತರ ದೊಡ್ಡ ತಂಡದೊಂದಿಗೆ ತೆರಳುತ್ತಿದ್ದಾರೆ.

ಜೈಕಾರ ಹಾಗೂ ಪಕ್ಷದ ಬಾವುಟ, ಬಂಟಿಂಗ್ಸ್‍ಗಳೊಂದಿಗೆ ಸಾರ್ವಜನಿಕರ ಮನೆಗೆ ತೆರಳುತ್ತಿರುವ ಅಭ್ಯರ್ಥಿಗಳು ಇರುವ ಕೆಲವೇ ಸಮಯದಲ್ಲಿ ಸಾಧ್ಯವಾದಷ್ಟು ಮತಗಳನ್ನು ಯಾಚಿಸುವಲ್ಲಿ ನಿರತರಾಗಿದ್ದಾರೆ. ಹಲವು ಅಭ್ಯರ್ಥಿಗಳು ರಾಜ್ಯ ಹಾಗೂ ಕೇಂದ್ರ ಮಟ್ಟದ ಮುಖಂಡರ ಮೊರೆಯನ್ನೂ ಹೋಗಿದ್ದಾರೆ. ರಾಜ್ಯದ ಸಚಿವರು ಹಾಗೂ ಕೇಂದ್ರದ ಸಚಿವರನ್ನು ಚುನಾವಣಾ ಪ್ರಚಾರಕ್ಕೆ ಆಹ್ವಾನಿಸಿದ್ದು, ಈ ಮುಖಂಡರನ್ನೇ ಮುಂದಿಟ್ಟುಕೊಂಡು ಅಭ್ಯರ್ಥಿಗಳು ಮತ ಯಾಚಿಸುತ್ತಿದ್ದಾರೆ. ಮತದಾರರ ಬಳಿ ಮತ ಕೇಳುತ್ತಿರುವ ಅಭ್ಯರ್ಥಿಗಳು
ಛೀಮಾರಿ ಹಾಕಿಸಿಕೊಳ್ಳುವುದರಿಂದ ತಪ್ಪಿಸಿಕೊಳ್ಳದಂತಾಗಿದ್ದಾರೆ.

`ಕಳೆದ 5 ವರ್ಷಗಳಲ್ಲಿ ಏನು ಮಾಡಿದ್ದೀರಿ?' ಎಂದು ಪ್ರಶ್ನಿಸುತ್ತಿರುವ ಮತಪ್ರಭುಗಳು, ಈ ಬಾರಿ ತಮ್ಮ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯ ಮಾಡಿದರೆ ಮಾತ್ರ ಮತ ನೀಡುತ್ತೇವೆ ಎಂದು ಷರತ್ತು ವಿಧಿಸುತ್ತಿದ್ದಾರೆ. ಹಿರಿಯರಿದ್ದರೆ ಭಯವಿಲ್ಲ: ಅಭ್ಯರ್ಥಿಗಳಿಗೆ ಹಿರಿಯ ಮುಖಂಡರಿದ್ದರೆ ಹೆಚ್ಚಿನ ಹಿಂಜರಿಕೆಯಿಲ್ಲ. ರಾಜ್ಯ ಮಟ್ಟದ ಅಥವಾ ರಾಷ್ಟ್ರಮಟ್ಟದ ನಾಯಕರು ಜನರಿಗೆ ಹೆಚ್ಚು
ಪರಿಚಿತರಾಗಿರುವುದರಿಂದ ಮತ ಯಾಚಿಸಲು ಅಭ್ಯರ್ಥಿಗಳು ಹಿಂಜರಿಯುತ್ತಿಲ್ಲ. ಬಿಜೆಪಿಯಲ್ಲಿ ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ಕಾಂಗ್ರೆಸ್‍ನಲ್ಲಿ ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ರಾಮಲಿಂಗಾರೆಡ್ಡಿ,ಜೆಡಿಎಸ್‍ನಲ್ಲಿ ಎಚ್.ಡಿ.ಕುಮಾರಸ್ವಾಮಿ ಅಭ್ಯರ್ಥಿಗಳ ಪರ ಮತ ಕೇಳುತ್ತಿದ್ದಾರೆ.

SCROLL FOR NEXT