ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಅಂತಿಮವಾಗಿ 1151 ಮಂದಿ ಕಣದಲ್ಲಿ ಉಳಿದಿದ್ದಾರೆ. ಅದರಲ್ಲಿ ವಿಶೇಷವಾಗಿ 429 ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿ ಉಳಿಯುವ ಮೂಲಕ ವಿವಿಧ ರಾಜಕೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳ ನೆಮ್ಮದಿಗೆಡಿಸಿದ್ದಾರೆ. ನಾಮಪತ್ರ ವಾಪಸ್‍ಗೆ ಗುರುವಾರ ಕಡೆಯ ದಿನವಾಗಿತ್ತು.
ಒಟ್ಟು 1376 ಮಂದಿ ಅಭ್ಯರ್ಥಿಗಳು 2060 ನಾಮಪತ್ರ ಸಲ್ಲಿಸಿದ್ದರು. ಮಂಗಳವಾರ ಹಾಗೂ ಬುಧವಾರ ನಾಮಪತ್ರ ಪರಿಶೀಲನೆ ನಡೆಯಿತು. ಗುರುವಾರ ಕೆಲವು ಕಡೆ ಬಿಜೆಪಿ, ಕಾಂಗ್ರೆಸ್‍ನ ಬಂಡಾಯ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದರೂ ಕಾಂಗ್ರೆಸ್ ಪಕ್ಷಕ್ಕೆ ಒಂದು ವಾರ್ಡ್‍ನಲ್ಲಿ ಬಂಡಾಯ ಎದುರಾಗಿದೆ. ಜಯನಗರ ಪೂರ್ವ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಮುನಿಸಂಜೀವಯ್ಯ ಕಣದಲ್ಲಿ ಉಳಿದಿದ್ದಾರೆ.
ಕಾಂಗ್ರೆಸ್‍ನ 197, ಬಿಜೆಪಿಯ 198, ಜೆಡಿಎಸ್ 184, ಬಿಎಸ್ಪಿಯ 34, ಪಕ್ಷೇತರರು 429 ಮಂದಿ ಜತೆಗೆ ಎಐಎಂಐಎಂನ 12, ಎಸ್‍ಯುಸಿಐನಿಂದ 15, ಎಲ್‍ಎಸ್‍ಪಿಯಿಂದ 16, ಕೆಜೆಪಿಯ ಮೂವರು, ಎನ್‍ಸಿಪಿಯ ಮೂವರು, ಸಿಪಿಐಎಂನ 29, ಸಿಪಿಐನ ಮೂವರು ಸೇರಿದಂತೆ ಒಟ್ಟು 198 ವಾರ್ಡ್‍ಗಳಲ್ಲಿ 1151 ಮಂದಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಕಾಂಗ್ರೆಸ್ ಶಾಸಕ ಎಂ.ಟಿ.ಬಿ.ನಾಗರಾಜ್ ಸಹೋದರ ಸೇರಿದಂತೆ ಕೆಲವು ಬಂಡಾಯ ಅಭ್ಯರ್ಥಿಗಳ ಮನವೊಲಿಸಿ ನಾಮಪತ್ರ ವಾಪಸ್ ಪಡೆಯಲಾಯಿತು. ಅದೇ ರೀತಿ ಎಲ್ಲಾ ಬಿಜೆಪಿ ಮತ್ತು ಜೆಡಿಎಸ್‍ನಲ್ಲಿ ಅತೃಪ್ತರ ಸಮಾಧಾನಕ್ಕೂ ಸರ್ಕಸ್ ನಡೆಯಿತು.
ಬೆಳಗ್ಗಿನಿಂದಲೇ ಬಂಡಾಯ ಅಭ್ಯರ್ಥಿಗಳು ಮತ್ತು ಅತೃಪ್ತರ ಮನೆಗಳಿಗೆ ಭೇಟಿ ನೀಡಿದ ಪಕ್ಷಗಳ ನಾಯಕರು ಅಗತ್ಯ ಭರವಸೆಗಳನ್ನು ನೀಡಿ ಮನವೊಲಿಸಿದರು. ಹೆಚ್ಚು ಬಂಡಾಯ ಬಿಸಿ ಎದುರಿಸುತ್ತಿದ್ದ ಬಿಜೆಪಿ ನಾಯಕರು ಎಚ್‍ಎಸ್‍ಆರ್ ಬಡಾವಣೆಯ ಬಂಡಾಯ ಅಭ್ಯರ್ಥಿ ಲತಾ ನರಸಿಂಹಮೂರ್ತಿ ಹಾಗೂ ದೊಮ್ಮಲೂರಿನ ಬಂಡಾಯ ಅಭ್ಯರ್ಥಿ ಲಕ್ಷ್ಮೀನಾರಾಯಣ ಅವರ ನಾಮಪತ್ರ ವಾಪಸ್ ತೆಗೆಸುವಲ್ಲಿ ಯಶಸ್ವಿಯಾದರು. ಅದೇ ರೀತಿ ದೊಮ್ಮಲೂರಿನಲ್ಲಿ ಜೋಗುಪಾಳ್ಯದಲ್ಲಿ ಕಣಕ್ಕಿಳಿದಿದ್ದ ಗೀತಾ ಶ್ರೀನಿವಾಸ ರೆಡ್ಡಿ ಅವರು ಕಣದಿಂದ ಹಿಂದೆಸರಿದರು. ಸಂಜಯïನಗರ ವಾಡ್ರ್ ನಲ್ಲಿ ಬಂಡಾಯ ಮುಖಂಡರಾಗಿದ್ದ ನಾಗರಾಜ್ ಅವರನ್ನು ಶಾಸಕ ಜಗದೀಶ್ ಕುಮಾರ್ ಮತ್ತು ಮಾಜಿ ಕಾರ್ಪೊರೇಟರ್ ಕಟ್ಟಾ ಜಗದೀಶ್ ಮನವೊಲಿಸಿ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಮಾಡಿದರು.
ಇನ್ನೂ ಕಾಂಗ್ರೆಸ್‍ನಲ್ಲೂ ಇದೇ ಸ್ಥಿತಿ ಮುಂದುವರಿದು, ಗರುಡಾಚಾರ್ ಪಾಳ್ಯದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಸಹೋದರ ಪಿಳ್ಳಪ್ಪ ಜತೆ ಯಶಸ್ವಿ ಸಂಧಾನ ನಡೆಯಿತು. ಶಾಸಕ ನಾಗರಾಜ್ ಮತ್ತು ಮುಖಂಡರು ಪಿಳ್ಳಪ್ಪ ಮನೆಗೆ ತೆರಳಿ ನಾಮಪತ್ರ ವಾಪಸ್ ಪಡೆಯುವಂತೆ ಮನವೊಲಿಸಿದರು.