ಪ್ರಧಾನ ಸುದ್ದಿ

ಅಮಿತ್ ಶಾ ಲಿಫ್ಟ್ ಜಾಮ್‌ಗೆ ಓವರ್‌ಲೋಡ್ ಕಾರಣ: ಬಿಹಾರ ಸರ್ಕಾರ

Lingaraj Badiger

ಪಾಟ್ನಾ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಪಕ್ಷದ ಇತರೆ ಮೂವರು ನಾಯಕರು ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡ ಘಟನೆಗೆ ಸಂಬಂಧಿಸಿದಂತೆ ಈಗ ಆರೋಪ ಪ್ರತ್ಯಾರೋಪಗಳು ಆರಂಭವಾಗಿವೆ.

ಘಟನೆಯ ನಂತರ ಮಾಹಿತಿ ಮತ್ತು ಸಾರ್ವಜನಿಕ ಸಂಬಂಧ ಇಲಾಖೆ ಕಾರ್ಯದರ್ಶಿ ಪ್ರತ್ಯಯ್ ಅಮ್ರಿತ್ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಸಂಪುಟ ಸಹಕಾರ ಪ್ರಧಾನ ಕಾರ್ಯದರ್ಶಿ ಶಿಶಿರ್ ಸಿನ್ಹಾ ಅವರು, ಘಟನೆಗೆ ಓವರ್‌ಲೋಡ್ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದ್ದಾರೆ.

ರಾಜ್ಯ ಅತಿಥಿ ಗೃಹದ ಲಿಫ್ಟ್‌ನ ಸಾಮರ್ಥ್ಯ 340ಕೆ.ಜಿ.ಇದೆ. ಆದರೆ ಅಮಿತ್ ಶಾ ಅವರೊಂದಿಗೆ ಐದಕ್ಕಿಂತ ಹೆಚ್ಚು ಜನ ಆಗಮಿಸಿದ್ದಾರೆ. ಹೀಗಾಗಿ ಲಿಫ್ಟ್ ಜಾಮ್ ಆಗಿದೆ ಎಂದು ಸಿನ್ಹಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಸಾಮಾನ್ಯವಾಗಿ ಲಿಫ್ಟ್‌ನಲ್ಲಿ ನಾಲ್ಕು ಜನರಿಗೆ ಅವಕಾಶ ನೀಡಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಮಿತಿಗಿಂತ ಹೆಚ್ಚು ಜನ ತೆರಳಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಆದರೆ ಘಟನೆಗೆ ಬಿಹಾರ ಸರ್ಕಾರದ ನಿರ್ಲಕ್ಷವೇ ಕಾರಣ ಎಂದಿರುವ ಬಿಹಾರ ಬಿಜೆಪಿ ಅಧ್ಯಕ್ಷ ಮಂಗಲ್ ಪಾಂಡೆ ಅವರು, ಲಿಫ್ಟ್ ಜಾಮ್ ಆದ ವೇಳೆ ತುರ್ತು ಪರಿಸ್ಥಿತಿ ನಿಭಾಯಿಸಲು ಯಾವುದೇ ಸಿಬ್ಬಂದಿಯಾಗಲಿ ಅಥವಾ ಲಿಫ್ಟ್ ನಿರ್ವಾಹಕರಾರು ಇರಲಿಲ್ಲ ಎಂದಿದ್ದಾರೆ.

ಇನ್ನು ಸಂಬಂಧ ಬಿಹಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಹಿರಿಯ ಬಿಜೆಪಿ ನಾಯಕ ಸಿ.ಪಿ.ಥಾಕೂರ್ ಅವರು, ಘಟನೆಯ ಹಿಂದೆ ಪಿತೂರಿ ಇದೆ ಎಂದು ಆರೋಪಿಸಿದ್ದಾರೆ.

SCROLL FOR NEXT