ಪ್ರಧಾನ ಸುದ್ದಿ

ಜಮ್ಮು ಕೋಮುಗಲಭೆ; ಹೆದ್ದಾರಿ ಬಂದ್; ಕರ್ಫ್ಯೂ ಜಾರಿ

Guruprasad Narayana

ಜಮ್ಮು: ನೆನ್ನೆ ರಾತ್ರಿ ನಡೆದ ಕೋಮು ಘರ್ಷಣೆಯಿಂದ ಪ್ರತಿಭಟನಕಾರರು ಇಂದು ಪೊಲಿಸರೊಂದಿಗೂ ಘರ್ಷಣೆ ಮಾಡಿ ಜಮ್ಮು ಕಾಶ್ಮೀರದ ಪಠಾನ್ ಕೋಟೆ-ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಿದ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕೋಮು ಗಲಭೆಗಳ ಹಿನ್ನಲೆಯಲ್ಲಿ ಜಮ್ಮುವಿನ ಸಾಂಬಾ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಕರ್ಫ್ಯೂ ವಿಧಿಸಲಾಗಿತ್ತು.

ಹೆದ್ದಾರಿಯಲ್ಲಿ ಪ್ರತಿಭಟನಕಾರರನ್ನು ಚದುರಿಸಲು ಆಶ್ರು ವಾಯು ಮತ್ತು ಲಾಠಿ ಚಾರ್ಚ್ ಮೊರೆಹೋಗಬೇಕಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸಾಂಬಾ ಜಿಲ್ಲೆಯಲ್ಲಿ ಹಸುವೊಂದನ್ನು ಕೊಲ್ಲಲಾಗಿದೆ ಎಂಬ ವದಂತಿ ಈ ಕೋಮುಗಲಭೆಗೆ ಎಡೆ ಮಾಡಿಕೊಟ್ಟಿತ್ತು. ಆದರೆ ಈ ಪ್ರದೇಶದಲ್ಲಿ ಯಾವುದೇ ಹಸುವನ್ನು ಕೊಲ್ಲಲಾಗಿಲ್ಲ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಬೀದಿಯಲ್ಲಿ ಸಿಕ್ಕ ಪ್ರಾಣಿಯ ಅವಶೇಷಗಳು ಎಮ್ಮೆಯ ಕರುವಿನದ್ದು ಮತ್ತು ಅದು ಸತ್ತು ೧೦೦ ಘಂಟೆಗಳು ಕಳೆದಿತ್ತು ಎಂದು ಮರಣೋತ್ತರ ಪರೀಕ್ಷೆ ತಿಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾರಿ ಬ್ರಾಹ್ಮಣ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರ ಆವರಣದಲ್ಲಿ ಧಾರ್ಮಿಕ ಗ್ರಂಥಗಳನ್ನು ಸುಡಲಾಗಿದೆ ಎಂದು ಒಂದು ಕೋಮಿನವರು ಆರೋಪಿಸಿದ್ದಾರೆ.

ಮೊದಲ ಕೋಮು ಘರ್ಷಣೆ ಗುರುವಾರ ಸಂಜೆ ಸಾಂಬಾ ಪ್ರದೇಶದಲ್ಲಿ ವರದಿಯಾಗಿದ್ದು ಪ್ರತಿಭಟನಕಾರರು ಜಿಲ್ಲ ಮೆಜೆಸ್ಟ್ರೆಟ್ ವಾಹನಕ್ಕೆ ಬೆಂಕಿ ಹಚ್ಚಿದ್ದಲ್ಲದೆ ಜಮ್ಮು-ಶ್ರೀನಗರ ಹೆದ್ದಾರಿಯ ವಾಹನಗಳ ಮೇಲೂ ದಾಳಿ ಮಾಡಿದ್ದಾರೆ.

ಈ ಘರ್ಷಣೆಗಳಿಂದ ಹಲವಾರು ಪೊಲೀಸರು ಮತ್ತು ಪ್ರತಿಭಟನಕಾರರು ಗಾಯಗೊಂಡಿದ್ದಾರೆ. ರಾತ್ರಿಯೇ ಪರಿಸ್ಥಿತಿಯನ್ನು ನಿಯಂತ್ರಿಸಲು ಸೇನೆಯನ್ನು ಕರೆಯಲಾಗಿದೆ. ಪರಿಸ್ಥಿಯನ್ನು ನಿಯಂತ್ರಿಸಲು ಎರಡೂ ಕೋಮಿನ ಹಿರಿಯರ ಸಹಾಯವನ್ನು ಕೋರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT