ಹೈದರಾಬಾದ್: ತೆಲಂಗಾಣ ಸರ್ಕಾರದ ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿ ಸ್ಮಿತಾ ಸಭರ್ವಾಲ್ ಅವರಿಗೆ ತಮ್ಮ ವಿರುದ್ಧ ಆಕ್ಷೇಪಾರ್ಹ ಕಾರ್ಟೂನ್ ಮತ್ತು ಲೇಖನ ಪ್ರಕಟಿಸಿದ ಔಟ್ ಲುಕ್ ವಾರಪತ್ರಿಕೆ ವಿರುದ್ಧ ೧೦ ಕೋಟಿಗಳ ನಾಗರಿಕ ವ್ಯಾಜ್ಯ ಪ್ರಕರಣವನ್ನು ದಾಖಲಿಸಲು ಸರ್ಕಾರ ಅನುಮತಿ ನೀಡಿದೆ. ಈ ಪ್ರಕರಣಕ್ಕೆ ಅಗತ್ಯವಿರುವ ೧೫ ಲಕ್ಷ ರೂ ಹಣವನ್ನು ಸರ್ಕಾರ ನೀಡಲಿದೆ.
ಇದಕ್ಕೂ ಮೊದಲು ಸ್ಮಿತಾ ಅವರ ಪತಿ ಅಕುನ್ ಸಭರ್ವಾಲ್ ಅವರು ಔಟ್ಲುಕ್ ವಾರಪತ್ರಿಕೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡೀದ್ದರು. ಇತ್ತೀಚೆಗಷ್ಟೇ ಪೊಲೀಸರು ಔಟ್ ಲುಕ್ ಪತ್ರಿಕೆಯ ಸಿಬ್ಬಂದಿಯನ್ನು ಪ್ರಶ್ನಿಸಿದ್ದರು.
ಲೇಖನಕ್ಕೆ ಕ್ಷಮೆ ಕೋರಿ ಔಟ್ ಲುಕ್ ಪತ್ರಿಕೆ ಕ್ಷಮಾಪಣೆ ಪ್ರಕಟಿಸಿದ್ದರೂ, ಇದು ಸಮರ್ಪಕವಲ್ಲ ಎಂದು ಐಎಎಸ್ ಅಧಿಕಾರಿ ನಾಗರಿಕ ವ್ಯಾಜ್ಯವನ್ನು ಹೂಡಲು ಮುಂದಾಗಿದ್ದಾರೆ.
ಈ ನಾಗರೀಕ ವ್ಯಾಜ್ಯವನ್ನು ಹೂಡಲು ಕೋರ್ಟ್ ನಲ್ಲಿ ೯.೭೫ ಲಕ್ಷವನ್ನು ಜಮಾ ಮಾಡಬೇಕಿರುವುದರಿಂದ ತಮಗೆ ೧೫ ಲಕ್ಷ ರೂ ಬಿಡುಗಡೆ ಮಾಡುವಂತೆ ಸ್ಮಿತಾ ರಾಜ್ಯ ಸರ್ಕಾರಕ್ಕೆ ಬೇಡಿಕೆಯಿಟ್ಟಿದ್ದರು.
ಒಂದೆ ವೇಳೆ ಈ ಪ್ರಕರಣದಲ್ಲಿ ಅವರು ಪರಿಹಾರ ಪಡೆದರೆ ೧೫ ಲಕ್ಷ ರೂಗಳನ್ನು ಸರ್ಕಾರಕ್ಕೆ ಹಿಂದಿರುಗಿಸಬೇಕು ಎಂಬ ಷರತ್ತಿನೊಂದಿಗೆ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದೆ.