ಹುಬ್ಬಳ್ಳಿ: ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಸರ್ವ ಪಕ್ಷಗಳ ಸಭೆಗೆ ಮುನ್ನವೇ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಚರ್ಚಿಸಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ರೇವಣಸಿದ್ದೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಕೇಂದ್ರದ ಜಲಸಂಪನ್ಮೂಲ ಖಾತೆ ಸಚಿವೆ ಉಮಾಭಾರತಿಯವರಿಗೂ ಕೂಡಾ ಕಳಸಾ ಬಂಡೂರಿ ಯೋಜನೆ ವಿವರಿಸಿದ್ದೇನೆ ಎಂದು ಜೋಷಿ ಹೇಳಿದ್ದರು. ಆದರೆ, ಸರ್ವಪಕ್ಷ ಸಭೆಗೆ ದೆಹಲಿಗೆ ಹೋದಾಗ ಉಮಾಭಾರತಿ ದೆಹಲಿಯಲ್ಲಿಯೇ ಇರಲಿಲ್ಲ ಎನ್ನುವುದು ನಂತರ ಗೊತ್ತಾಗಿದೆ ಎಂದು ಸ್ವಾಮೀಜಿ ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿಯವರಿಗೆ ಯೋಜನೆಯ ಬಗ್ಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು. ಬಿಜೆಪಿ ನಾಯಕರಾದ ಯಡಿಯೂರಪ್ಪ ಕೂಡಾ ಪ್ರದಾನಿಯೊಂದಿಗೆ ಮಾತುಕತೆ ನಡೆಸಿದರು. ಆದರೆ, ನಮ್ಮ ಕಡೆಯ ಸಂಸದರು ಮಾತ್ರ ಮೌನವನ್ನು ಬಿಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಹೋರಾಟದ ವೇದಿಕೆಯಲ್ಲಿ ಇಲ್ಲ ಸಲ್ಲದ ಭರವಸೆಗಳನ್ನು ನೀಡುವ ಜೋಷಿ ನಂತರ ತಮ್ಮ ಭರವಸೆಗಳನ್ನು ಮರೆಯುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಹ್ಲಾದ್ ಜೋಷಿ ತಾವು ನೀಡಿದ ಹೇಳಿಕೆಯ ಬಗ್ಗೆ ಗಂಭೀರವಾಗಿ ಪರಿಗಣಿಸದಿದ್ದಲ್ಲಿ ನಾನೊಬ್ಬ ಸ್ವಾಮಿಜಿಯಾಗಿ ಜೋಷಿಯವರ ಮನೆಯ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ರೇವಣಸಿದ್ದೇಶ್ವರ ಸ್ವಾಮೀಜಿ ಎಚ್ಚರಿಸಿದ್ದಾರೆ.
ಮಹದಾಯಿ ಯೋಜನೆ: ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕಳಸಾ ಬಂಡೂರಿ ಮತ್ತು ಮಹದಾಯಿ ಯೋಜನೆ ಜಾರಿ ವಿಚಾರ ಸರ್ವಪಕ್ಷಗಳ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಮಹದಾಯಿ ನದಿ ಜೋಡಣೆ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ಹಿಂಸಾಚಾರಕ್ಕೆ ತಿರುಗಿದೆ.
ಇಂದು ಕರೆ ನೀಡಲಾದ ಧಾರವಾಡ ಜಿಲ್ಲೆ ಬಂದ್ ವೇಳೆ ಪ್ರತಿಭಟನಾನಿರತರು ಗೋವಾ ಬಸ್‌ಗೆ ಬೆಂಕಿ ಹಚ್ಚಿದ್ದಾರೆ. ಇಡೀ ಧಾರವಾಡ ಜಿಲ್ಲೆ ಸಂಪೂರ್ಣ ಸ್ತಬ್ಧಗೊಂಡಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಹದಾಯಿ ನದಿ ಜೋಡಣೆಗಾಗಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ರೈತರ ಶಾಂತಿಯುತ ಪ್ರತಿಭಟನೆ ಕಳೆದ ಆಗಸ್ಟ್ 24 ರಿಂದ ಹಿಂಸಾಚಾರಕ್ಕೆ ತಿರುಗಿದೆ.
ದೆಹಲಿಗೆ ರಾಜ್ಯದ ಸರ್ವಪಕ್ಷ ನಿಯೋಗ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಮರ್ಪಕ ಭರವಸೆ ದೊರಕದ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಹಿಂಸಾಚಾರಕ್ಕೆ ತಿರುಗಿರುವ ಈ ಹೋರಾಟದ ಕಿಚ್ಚು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಶಾಂತವಾಗುವ ಲಕ್ಷಣ ಕಂಡುಬರುತ್ತಿಲ್ಲ. ಬಂಡಾಯದ ಬೀಡಾದ ನರಗುಂದ, ನವಲಗುಂದದಲ್ಲಿ ಮೊನ್ನೆಯಿಂದಲೇ ಬಸ್‌ಗಳಿಗೆ ಬೆಂಕಿ, ಕಲ್ಲು ತೂರಾಟದ ಪ್ರಕರಣಗಳು ಜರುಗಿವೆ.
ಈ ಹಿಂಸಾಚಾರ ಈಗ ಇಡೀ ಧಾರವಾಡ ಜಿಲ್ಲೆಯನ್ನೇ ಆವರಿಸಿದ್ದು ನಿನ್ನೆ ತಡರಾತ್ರಿ 3 ಗಂಟೆಗೆ ನಗರದ ಹೊಸ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಗೋವಾ ರಾಜ್ಯದ ಬಸ್ (ನಂ. ಜಿಎ 030-332) ಗೆ ಬೆಂಕಿ ಹಚ್ಚಲಾಗಿದ್ದು ಬಸ್ ಸಂಪೂರ್ಣವಾಗಿ ಭಸ್ಮವಾಗಿದೆ. ಅಲ್ಲದೆ ಕಂಡಕ್ಟರ್‌ನ ಬಳಿಯಿದ್ದ ಟಿಕೆಟ್ ನೀಡುವ ಯಂತ್ರ ಹಾಗೂ ಟಿಕೇಟ್‌ಗಳನ್ನು ಕೂಡ ಆಕ್ರೋಶ ಭರಿತ ಪ್ರತಿಭಟನಾಕಾರರು ಸುಟ್ಟು ಹಾಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics