ಪ್ರಧಾನ ಸುದ್ದಿ

ಪ್ರಧಾನಿಯಿಂದ ಸಕಾರಾತ್ಮಕ ಸ್ಪಂದನೆ: ಬಿಜೆಪಿ

Sumana Upadhyaya

ನವದೆಹಲಿ: ಮಹಾದಾಯಿ ನದಿ ನೀರು ಹಂಚಿಕೆ ವಿವಾದವನ್ನು ನ್ಯಾಯಾಧೀಕರಣದ ಹೊರಗೆ ಇತ್ಯರ್ಥಪಡಿಸಿಕೊಳ್ಳುವ  ಕರ್ನಾಟಕದ ಪ್ರಸ್ತಾಪಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ
ಕರೆಯುವುದಾಗಿ ತಿಳಿಸಿದ್ದಾರೆ ಎಂದು ಕೇಂದ್ರ ಸಚಿವರಾದ ಅನಂತಕುಮಾರ್ ಮತ್ತು ವೆಂಕಯ್ಯ ನಾಯ್ಡು ಸ್ಪಷ್ಟಪಡಿಸಿದ್ದಾರೆ.

ಈ ಕುರಿತಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಇತರರು ಪ್ರಧಾನಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂಬ ಹೇಳಿಕೆ ನೀಡಿರುವುದು ಸರಿಯಲ್ಲ, ನಾವೂ ನಿಯೋಗದಲ್ಲಿ ಭಾಗಿಯಾಗಿದ್ದೆವು ಎಂದು ಸಚಿವರಿಬ್ಬರು ತಿಳಿಸಿದರು.

ಮುಖ್ಯಮಂತ್ರಿಗಳ ಸಭೆಗೂ ಮುನ್ನ ಪೂರಕ ವಾತಾವರಣ ನಿರ್ಮಿಸುವ ಸಲುವಾಗಿ, ನೀವು ಮಹಾರಾಷ್ಟ್ರ ಮತ್ತು ಗೋವಾದಲ್ಲಿರುವ ಕಾಂಗ್ರೆಸ್ ನಾಯಕರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿ, ನಾವು(ಬಿಜೆಪಿ) ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸುತ್ತೇವೆ. ನಂತರ ಸಭೆ ಕರೆದು ಚರ್ಚಿಸಿ ಇತ್ಯರ್ಥಪಡಿಸುವ ಎಂದು ಪ್ರಧಾನಿ ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡರು, ಮಹಾರಾಷ್ಟ್ರ ಮತ್ತು ಗೋವಾ ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚಿಸಿ ಎಂದದ್ದನ್ನು ನಿಯೋಗದಲ್ಲಿದ್ದವರು ತಪ್ಪಾಗಿ ಅರ್ಥೈಸಿದ್ದಾರೆ, ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ, ಇದು ಸರಿಯಲ್ಲ ಎಂದು ವೆಂಕಯ್ಯನಾಯ್ಡು ಹೇಳಿದರು.

SCROLL FOR NEXT