ಚಂಡೀಘರ್: ರಕ್ಷಾ ಬಂಧನದ ಅಂಗವಾಗಿ ಶನಿವಾರ ಹರ್ಯಾಣ ಮತ್ತು ಚಂಡೀಘರದಲ್ಲಿ ಮಹಿಳೆಯರು ರಾಜ್ಯ ಸರ್ಕಾರದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ಬಳಸಿಕೊಂಡಿದ್ದಾರೆ.
ಆಗಸ್ಟ್ ೨೮ ಮತ್ತು ಆಗಸ್ಟ್ ೨೯ ರಂದು ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರಿಗೆ ವಿಶೇಷ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವುದಾಗಿ ಹರ್ಯಾಣ ಸರ್ಕಾರ ತಿಳಿಸಿತ್ತು.
ಪಂಜಾಬ್, ಹರ್ಯಾಣ ಮತ್ತು ಚಂಡೀಘರದಾದ್ಯಂತ ಶನಿವಾರ ವೈಭವವಾಗಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತಿದೆ. ರಕ್ಷಾ ಬಂಧನದ ಕೊಡುಗೆಯಾಗಿ ಹರ್ಯಾಣ ಸರ್ಕಾರ ಶುಕ್ರವಾರ ರಾಜ್ಯದಾದ್ಯಂತ ೨೧ ಜಿಲ್ಲೆಗಳಲ್ಲಿ ಸಂಪೂರ್ಣ ಮಹಿಳಾ ಪೊಲೀಸ್ ಠಾಣೆಗಳನ್ನು ಉದ್ಘಾಟಿಸಿದೆ.