ನವದೆಹಲಿ: ದೆಹಲಿ ಆಮ್ ಆದ್ಮಿ ಪಕ್ಷದ ಸರ್ಕಾರದ ವಿರುದ್ಧ ಅದೇ ಪಕ್ಷದ ಸಂಗಮ್ ವಿಹಾರ್ ನ ಶಾಸಕ ಪಂಕಜ್ ಪುಷ್ಕರ್, ತಮ್ಮ ಕ್ಷೇತ್ರದಲ್ಲಿ ಡೆಂಗ್ಯೂ ಇಂದ ಸಾವಿಗೀಡಾಗುತ್ತಿರುವ ಜನರ ಕುಟುಂಬಗಳ ಬೇಡಿಕೆಗಳಿಗೆ ಮನ್ನಣೆ ನೀಡದಿರುವುದಕ್ಕೆ ಪ್ರತಿಭಟನೆ ನಡೆಸಿದ್ದಾರೆ.
"ಜನರು ಡೆಂಗ್ಯೂ ಇಂದ ಸಾವಿಗೀಡಾಗುತ್ತಿರುವುದರಿಂದ ಸಂಗಂ ವಿಹಾರ್ ಕ್ಷೇತ್ರಕ್ಕೆ ಅವಮಾನವಾಗಿದೆ. ಆಡಳಿತ ಇದರ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ. ಸರ್ಕಾರಕ್ಕೆ ಇದರತ್ತ ಗಮನ ಹರಿಸುವಂತೆ ಹೇಳುವುದು ನನ್ನ ಕರ್ತವ್ಯ" ಎಂದು ಪುಷ್ಕರ್ ಹೇಳಿದ್ದಾರೆ.
ನಾನು ಯಾರ ವಿರುದ್ಧವೂ ಹೋಗಿಲ್ಲ ಆದರೆ ರಾಜ್ಯ ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ನೀಡಲಾಗಿಲ್ಲ ಎಂದು ಕೂಡ ಅವರು ತಿಳಿಸಿದ್ದಾರೆ.
ಸರ್ಕಾರ ಜಾಹಿರಾತು ಸಂಸ್ಥೆಯಲ್ಲ ಬದಲಾಗಿ ಕಾಯಕ ಮಾಡುವ ಸಂಸ್ಥೆ ಎಂದಿರುವ ಅವರು ಸದರಿ ಸರ್ಕಾರ ಜನರನ್ನು ಕಡೆಗಣಿಸಿ ಜಾಹಿರಾತುಗಳ ಮೇಲೆ ಹೆಚ್ಚಿನ ಹಣ ವ್ಯಯಿಸುತ್ತಿದೆ ಎಂದು ದೂರಿದ್ದಾರೆ.
ನಾವು ಜಾಹೀರಾತಿನ ಮೇಲೆ ೫೩೦ ಕೋಟಿ ವ್ಯಯಿಸಿದ್ದೇವೆ. ಸಣ್ಣ ಸಣ್ಣ ಬೀದಿಗಳಲ್ಲೂ ಜಾಹೀರಾತು ನೋಡಬಹುದು, ಆದರೆ ಸಣ್ಣ ಸಣ್ಣ ಕೆಲಸಗಳನ್ನು ಮಾಡಿಲ್ಲ ಎಂದಿರುವ ಅವರು ದೆಹಲಿ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಬಗ್ಗೆ ಸೂಕ್ಷ್ಮತೆ ಇಲ್ಲ ಎಂದಿದ್ದಾರೆ.