ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದಾಳಿ ನಡೆಸಲು ಉಗ್ರ ಸಂಘಟನೆಯಾದ ಲಷ್ಕರೆ ತೊಯ್ಬಾ ಸಂಚು ಹೂಡಿತ್ತು. ಆದರೆ ಈ ಸಂಚನ್ನು ಗುಪ್ತಚರ ಇಲಾಖೆ ವಿಫಲಗೊಳಿಸಿದೆ ಎಂದು ಸುದ್ದಿಮೂಲಗಳಿಂದ ತಿಳಿದು ಬಂದಿದೆ.
ಮೋದಿ ಸೇರಿದಂತೆ ಹಲವು ಗಣ್ಯರ ಮೇಲೆ ದಾಳಿ ಮಾಡಲು ಲಷ್ಕರೆ ತೊಯ್ಬಾ ಸಂಚು ಹೂಡಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಮೋದಿಯವರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ 26/11 ರ ರೀತಿಯಲ್ಲಿ ದಾಳಿ ನಡೆಸಲು ಉಗ್ರರು ಯೋಜನೆ ರೂಪಿಸಿದ್ದರು ಎನ್ನಲಾಗುತ್ತಿದೆ.
ದೇಶದ ರಾಜಧಾನಿಯಲ್ಲಿ ಗಣ್ಯರಿಗೆ ಗುರಿಯಿಟ್ಟು ಉಗ್ರ ಕೃತ್ಯಗಳನ್ನು ನಡೆಸಲು 4 ಉಗ್ರರು ಭಾರತಕ್ಕೆ ನುಸುಳಿದ್ದಾರೆ ಎಂದು ದೆಹಲಿ ಪೊಲೀಸ್ ವಿಶೇಷ ಪಡೆ ಈ ಹಿಂದೆಯೇ ಮುನ್ನೆಚ್ಚರಿಕೆ ನೀಡಿತ್ತು. ಕಳೆದ ತಿಂಗಳು ಈ ಉಗ್ರರು ಭಾರತದೊಳಗೆ ನುಸುಳಿದ್ದರು. ಲಷ್ಕರೆ ಕಮಾಂಡರ್ ಅಬು ದುಜನ್ ಜತೆ ಇವರು ಸಂಪರ್ಕ ಹೊಂದಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ದುಜನ್, ಉಕಾಕ್ಷ ಎಂಬ ಹೆಸರಿರುವ ಇವರನ್ನು ಪತ್ತೆ ಹಚ್ಚುವ ಕ್ರಿಯೆ ಬಿರುಸಿನಿಂದ ಸಾಗಿದೆ.
ಅದೇ ವೇಳೆ ಡಿ. 6 ರಂದು ಬಾಬರಿ ಮಸೀದಿ ಧ್ವಂಸ ನಡೆದ ದಿನವಾಗಿರುವುದರಿಂದ ದೆಹಲಿಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.