ಸಂತ್ರಸ್ತರಿಗೆ ಹೆಲಿಕಾಪ್ಟರ್ ಮೂಲಕ ಆಹಾರ ಪೂರೈಸುತ್ತಿರುವ ಸೇನಾ ಸಿಬ್ಬಂದಿ
ಚೆನ್ನೈ: ಮಳೆರಾಯ ತಮಿಳುನಾಡನ್ನು ಅಷ್ಟು ಬೇಗ ಬಿಡುವಂತೆ ಕಾಣುತ್ತಿಲ್ಲ. ತನ್ನ ತೀವ್ರತೆಯನ್ನು ಕಡಿಮೆಗೊಳಿಸದೇ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕುತ್ತಿದೆ. ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದೇ ಇದಕ್ಕೆ ಸಾಕ್ಷಿ.
ಈಗಾಗಲೇ ಪ್ರವಾಹದಿಂದ ತತ್ತರಿಸಿಹೋಗಿರುವ ತಮಿಳುನಾಡಿನ ಕರಾವಳಿ ಮತ್ತು ಒಳನಾಡಿನಲ್ಲಿ ಹಾಗೂ ಪುದುಚೇರಿಯಲ್ಲಿ ಧಾರಾಕಾರ ಮಳೆಯಾಗಲಿದ್ದು, ಕಡಲೂರಿನಲ್ಲಿ ಮಳೆಯ ತೀವ್ರತೆ ಇನ್ನಷ್ಟು ತೀವ್ರವಾಗಿರಲಿದೆ ಎಂದೂ ಇಲಾಖೆ ಎಚ್ಚರಿಸಿದೆ. ಮುಂಜಾಗ್ರತಾ ಕ್ರಮವಾಗಿ ಸರ್ಕಾರವು ಸೋಮವಾರ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿದೆ.
ದಂಡ ಮನ್ನಾ: ಡಿಎಚ್‍ಎಫ್ ಎಲ್, ಎಸ್‍ಬಿಐ, ಐಸಿಐಸಿಐ ಬ್ಯಾಂಕ್, ಎಚ್‍ಡಿಎಫ್ ಸಿ, ಆ್ಯಕ್ಸಿಸ್ ಬ್ಯಾಂಕ್ ಸೇರಿದಂತೆ ಪ್ರಮುಖ ಹಣಕಾಸು ಸಂಸ್ಥೆಗಳು ತಮಿಳುನಾಡಿನ ಗ್ರಾಹಕರ ಇಎಂಐ ಪಾವತಿ ವಿಳಂಬವಾಗಿದ್ದಕ್ಕೆ ವಿಧಿಸಲಾಗುವ ದಂಡವನ್ನು ಮನ್ನಾ ಮಾಡಿವೆ. ಜನರ ಸಂಕಷ್ಟ ಅರಿತು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಈ ಸಂಸ್ಥೆಗಳು ತಿಳಿಸಿವೆ.
ನೆರವಿಗಾಗಿ ಒಂದಾದ ಸಿನಿಮಾ ತಾರೆಯರು: ಪ್ರವಾಹಪೀಡಿತ ಪ್ರದೇಶಗಳ ಜನರ ಕಷ್ಟಕ್ಕೆ ದನಿಯಾಗುವ ಸಲುವಾಗಿ ದಕ್ಷಿಣ ಭಾರತದ ಸಿನಿಮಾ ನಟರು ಒಂದಾಗಿದ್ದಾರೆ. ರಾಣಾ ದಗ್ಗುಬಾಟಿ, ಧನುಷ್, ಅಲ್ಲಾರಿ ನರೇಶ್, ಅಲ್ಲು ಅರ್ಜುನ್, ಸಿದ್ಧಾರ್ಥ್ ಸೇರಿದಂತೆ ಅನೇಕ ನಟರು ಪರಸ್ಪರ ಕೈಜೋಡಿಸಿದ್ದು, ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ.
ಇವರು, ಆಹಾರ, ಔಷಧ, ಹೊದಿಕೆ ಹಾಗೂ ಇತರೆ ಅಗತ್ಯ ಸಾಮಗ್ರಿಗಳನ್ನು ಸಂತ್ರಸ್ತರಿರುವ ಪ್ರದೇಶಗಳಿಗೆ ಪೂರೈಸುತ್ತಿದ್ದಾರೆ. ತೆಲುಗಿನ ಕೆಲವು ಸಿನಿಮಾ ನಟರೂ ತಮಿಳರಿಗೆ ನೆರವಾಗುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದು, `ಮನ ಮದ್ರಾಸ್ ಕೋಸಂ' ಎಂಬ ಅಭಿಯಾನ ಆರಂಭಿಸಿದ್ದಾರೆ. ನಟ ರಾಣಾ ಅವರು ರಾಮನಾಯ್ಡು ದತ್ತಿ ಸಂಸ್ಥೆಯ ಮೂಲಕ ಹಣ ಸಂಗ್ರಹಿಸುವ ಕಾರ್ಯವನ್ನು ಆರಂಭಿಸಿದ್ದು, ಎಲ್ಲರೂ ಸಹಾಯ ಮಾಡುವಂತೆ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics