ಲೋಕಾ ಲಂಚ ಪ್ರಕರಣ: 4 ಆರೋಪಿಗಳಿಗೆ ಜಾಮೀನು ನೀಡಲು ಸುಪ್ರೀಂ ನಕಾರ
ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್...
ನವದೆಹಲಿ: ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಸೋಮವಾರ ಮತ್ತೆ ನಿರಾಕರಿಸಿದೆ.
ತಕ್ಷಣ ಜಾಮೀನು ನೀಡುವಂತೆ ಕೋರಿ ಆರೋಪಿಗಳಾದ ಲೋಕಾಯುಕ್ತ ಮಾಜಿ ಪಿಆರ್ಒ ಸೈಯದ್ ರಿಯಾಜ್, ಅಶೋಕ್ ಕುಮಾರ್, ಶಂಕರೇಗೌಡ ಹಾಗೂ ಶ್ರೀನಿವಾಸ್ ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ತಕ್ಷಣ ಜಾಮೀನು ನೀಡಲು ನಿರಾಕರಿಸಿ, ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 16ಕ್ಕೆ ಮುಂದೂಡಿದೆ.
ಲೋಕಾ ಕಚೇರಿಯಲ್ಲಿನ ಭ್ರಷ್ಟಾಚಾರ ಆರೋಪ ಕುರಿತು ತನಿಖೆ ಮುಂದುವರಿದಿದೆ. ಕೇವಲ ಕೆಲವು ಪ್ರಕರಣದಲ್ಲಿ ಮಾತ್ರ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಕೆಲವು ಪ್ರಕರಣಗಳಿಗೂ ಇವರಿಗೂ ನಂಟು ಇದ್ದಿದ್ದು, ಜಾಮೀನು ನೀಡಿದರೆ ತನಿಖೆಗೆ ಅಡ್ಡಿಯಾಗಲಿದೆ ಎಂದು ಎಸ್ಐಟಿ ಪರ ವಕೀಲರು ಸುಪ್ರೀಂಕೋರ್ಟ್ ನಲ್ಲಿ ವಾದ ಮಂಡಿಸಿದರು.
ಎಸ್ ಐಟಿ ಪರ ವಾದ ಆಲಿಸಿದ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಹಾಗೂ ನ್ಯಾ.ಅರುಣ್ ಮಿಶ್ರಾ ಅವರಿದ್ದ ಪೀಠ ಅರ್ಜಿದಾರರಿಗೆ ಅಫಿಡವಿಟ್ ಸಲ್ಲಿಸಲು ಸೂಚನೆ ನೀಡಿದೆ. ಅಲ್ಲದೇ ತಕ್ಷಣ ಜಾಮೀನು ನೀಡಲು ನಿರಾಕರಿಸಿದ್ದು, ವಿಚಾರಣೆಯನ್ನು ಡಿ.16ಕ್ಕೆ ಮುಂದೂಡಿ ಆದೇಶ ನೀಡಿದೆ.