ಜೆರ್ಸಿ ಸಿಟಿ(ಯುನೈಟೆಡ್ ಸ್ಟೇಟ್): ಮುಸಲ್ಮಾನರನ್ನು ದೇಶದೊಳಗೆ ಬಿಡಬಾರದು ಎಂದು ಹೇಳಿಕೆ ನೀಡಿ ಹಿಂಸಾಚಾರವನ್ನು ಪ್ರೋತ್ಸಾಹಿಸದಂತೆ ಅಮೆರಿಕದ ಮುಸಲ್ಮಾನರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಪ್ಯಾರಿಸ್ ದಾಳಿ ಮತ್ತು ದಂಪತಿಗಳಿಂದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಶೂಟೌಟ್ ಪ್ರಕರಣದ ನಂತರ ಡೊನಾಲ್ಡ್ ಟ್ರಂಪ್ ಅವರು ಈ ಕರೆ ನೀಡಿದ್ದಾರೆ. ಆದರೆ ಅವರ ಈ ಹೇಳಿಕೆಯಿಂದ ದೇಶದಲ್ಲಿ ಭಾರೀ ಮುಸ್ಲಿಂ ವಿರೋಧಿ ಅಲೆ ಸೃಷ್ಟಿಯಾಗಿದ್ದು, ಜನರಿಗೆ ನಮ್ಮನ್ನು ನೋಯಿಸುವ ಹಕ್ಕು ನೀಡುತ್ತಿದ್ದಾರೆ ಎಂದು 1980ರಲ್ಲಿ ಈಜಿಪ್ಟ್ ನಿಂದ ಅಮೆರಿಕಕ್ಕೆ ಬಂದು ನೆಲೆಸಿರುವ ಅಹ್ಮದ್ ಶೆದೀದ್ ಎಂಬುವವರು ಹೇಳುತ್ತಾರೆ. ಮಸೀದಿಯೊಂದರಲ್ಲಿ ಮಾತನಾಡಿದ ಅವರು, ಟ್ರಂಪ್ ಅವರು ದೇಶದಲ್ಲಿ ಹಿಂಸೆ ಮತ್ತು ದ್ವೇಷವನ್ನು ಹುಟ್ಟುಹಾಕುತ್ತಿದ್ದಾರೆ ಎಂದರು.
ಮುಸಲ್ಮಾನರ ವಿರುದ್ಧ ಹೇಳಿಕೆ ನೀಡುವ ಮೂಲಕ ಅಮೆರಿಕದ ಒಟ್ಟು ಜನಸಮುದಾಯದಿಂದ ನಮ್ಮನ್ನು ದೂರವಿಡುತ್ತಿದ್ದಾರೆ. ನಾವು ಎಲ್ಲಿಗೂ ಹೋಗುವುದಿಲ್ಲ. ಮುಸಲ್ಮಾನ ಅಮೆರಿಕನ್ನರಿಗೆ ಭೀತಿ ಹುಟ್ಟಿಕೊಂಡಿದೆ. ಮುಸಲ್ಮಾನರನ್ನು ಗುರಿಯಾಗಿರಿಸಿಕೊಂಡು ಸಂಚು ರೂಪಿಸಲಾಗುತ್ತಿದೆ ಎಂದು ಮುಸ್ಲಿಂ ಸಂಘಟನೆಗಳು ಆರೋಪಿಸಿವೆ.