ಸೋನಿಯಾ ಗಾಂಧಿ-ರಾಹುಲ್ ಗಾಂಧಿ
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧದ ನ್ಯಾಷನಲ್ ಹೆರಾಲ್ಡ್ ಪ್ರಕರಣ ಸತತ ಎರಡನೇ ದಿನವೂ ಸಂಸತ್ ಕಲಾಪವನ್ನು ಬಲಿತೆಗೆದುಕೊಂಡಿದ್ದು, ಸರ್ಕಾರದ ಬಹು ನಿರೀಕ್ಷಿತ ಜಿಎಸ್‍ಟಿ ಹಾಗೂ ರಿಯಲ್ ಎಸ್ಟೇಟ್ ಮಸೂದೆಗಳಿಗೆ ಅಡ್ಡಿಯುಂಟಾಗಬಹು ದು ಎಂಬ ಆತಂಕ ಮೂಡಿದೆ.
ಖಾಸಗಿ ಪ್ರಕರಣಕ್ಕೂ, ಸಂಸತ್‍ಗೂ ಯಾವುದೇ ಸಂಬಂಧವಿಲ್ಲ. ಆದರೂ ಈ ಪ್ರಕರಣವನ್ನು ಮುಂದಿಟ್ಟು ಕೊಂಡು ಕಾಂಗ್ರೆಸ್ ರಾಜಕೀಯ ಲಾಭದ ಲೆಕ್ಕಾಚಾರ ಮಾಡಿದೆ ಎಂಬ ವಿಶ್ಲೇಷಣೆಗಳೂ ಸಾಗಿವೆ.
ಹಣಕಾಸು ಸಚಿವ ಅರುಣ್ ಜೇಟ್ಲಿ ಪುತ್ರಿಯ ವಿವಾಹ ಆಮಂತ್ರಣದಿಂದ ಹಿಡಿದು, ಸೋನಿಯಾ ಗಾಂಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳುವವರೆಗೆ ಎಲ್ಲವನ್ನೂ ಸರಿ ಮಾಡುವ ಪ್ರಯತ್ನ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುಬ್ರಮಣ್ಯ ಸ್ವಾಮಿ ಅವರೇ ಅಡ್ಡಿಯಾಗಿದ್ದಾರೆ ಎಂಬ ಮಾತುಗಳೂ ದೆಹಲಿ ವಲಯದಲ್ಲಿ ಕೇಳಿಬರುತ್ತಿವೆ.
ಇದರ ನಡುವೆಯೇ, ಈ ಪ್ರಕರಣವನ್ನು ರಾಜಕೀಯ ಲಾಭಕ್ಕಾಗಿ ಹೇಗೆ ಬಳಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ಮುಳುಗಿವೆ ಎಂದು ವಿಶ್ಳೇಷಿಸಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ನ್ಯಾಷನಲ್ ಹೆರಾಲ್ಡ್ ಕೇಸಿನ ಸಂಬಂಧ ಇದೇ 19 ರಂದು ಕೋರ್ಟ್ ಮುಂದೆ ಹಾಜರಾಗುವು ದಾಗಿ ಸೋನಿಯಾ ಮತ್ತು ರಾಹುಲ್ ಸ್ಪಷ್ಟಪಡಿಸಿದ್ದಾರೆ.
ದೆಹಲಿ ಕೋರ್ಟ್ ಆದೇಶ ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಮೆಟ್ಟಿಲೇರದೇ ಇರಲು ಇವರಿಬ್ಬರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಕೋರ್ಟ್ ಮುಂದೆ ಹಾಜರಾಗಿ ಬಂಧನದ ಆದೇಶ ಸಿಕ್ಕಲೆ ಸೋನಿಯಾ ಮತ್ತು ರಾಹುಲ್ ಅವರು `ತ್ಯಾಗಮಯಿ' ಪಟ್ಟ ದಕ್ಕಿಸಿಕೊಳ್ಳಬಹುದು, ಅಲ್ಲದೆ ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸುವ ಲೆಕ್ಕಾಚಾರವೂ ಇದೆ ಎನ್ನಲಾಗಿದೆ.
ಬಂಧನವಾದರೆ ಲಾಭ?: ಪ್ರಕರಣದಲ್ಲಿ ಕಾಂಗ್ರೆಸ್‍ನ ಇಬ್ಬರು ವರಿಷ್ಠರು ನೇರವಾಗಿ ಭಾಗಿಯಾಗಿದ್ದಾರೆ ಎಂಬ ಆರೋಪಗಳಿವೆ. ಒಂದು ವೇಳೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗುವ ಸ್ಥಿತಿ ಉಂಟಾದರೆ ಬಿಜೆಪಿ ನೇತೃತ್ವದ ಸರ್ಕಾರ ತಮ್ಮನ್ನು ರಾಜಕೀಯವಾಗಿ ಮುಗಿಸುವ ಸಂಚು ರೂಪಿಸಿದೆ ಎಂದು ಬಿಂಬಿಸಬಹುದು ಎಂಬುದು ಕಾಂಗ್ರೆಸ್ನವರ ಇಂಗಿತ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics