ಪ್ಯಾರಿಸ್: 13 ದಿನಗಳ ಕಾಲ ಪ್ಯಾರಿಸ್‍ನಲ್ಲಿ ನಡೆದ ಕೋಪ್21 ವಿಶ್ವ ತಾಪಮಾನ ಶೃಂಗ ವಿಶ್ವ ಹವಾಮಾನ ವೈಪರೀತ್ಯ ಹಾಗೂ ತಾಪಮಾನ ಏರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ 195ಕ್ಕೂ ಹೆಚ್ಚು ರಾಷ್ಟ್ರಗಳ ನಾಯಕರು ಒಮ್ಮತದ ಒಪ್ಪಂದಕ್ಕೆ ಬರುವ ಮೂಲಕ ಶನಿವಾರ ಆಶಾದಾಯಕ ಅಂತ್ಯಕಂಡಿತು.
ಮುಂದುವರಿದ, ಅಭಿವೃದ್ಧಿ ಶೀಲ ರಾಷ್ಟ್ರಗಳ ನಡುವಿನ ಬಿರುಸಿನ ಚರ್ಚೆ ಹಾಗೂ ಇಂಗಾಲದ ಹೊರಸೂಸುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ 13 ದಿನ ನಿರಂತರವಾಗಿ ನಡೆದ ಮಾತುಕತೆ, ಸಂವಾದ, ಚರ್ಚೆಗಳಿಗೆ ಅಂತೂ ಸರ್ವಸಮ್ಮತ ಒಪ್ಪಂದ ಅರ್ಥಪೂರ್ಣ ವಿರಾಮ ಹಾಕಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸೇರಿದಂತೆ ವಿಶ್ವ ನಾಯಕರು, ಕಾನೂನು ಬದ್ಧತೆಯ ಈ ಒಪ್ಪಂದವನ್ನು ಸ್ವಾಗತಿಸಿದ್ದು, ಭವಿಷ್ಯದ ಜನಾಂಗದ ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಇದೊಂದು ಮಹತ್ವದ ಹೆಜ್ಜೆ ಎಂದು ಬಣ್ಣಿಸಿದ್ದಾರೆ. ಕಠಿಣ ಸವಾಲಿನ ಮಾತುಕತೆಗಳ ಮೂಲಕ ಈ ಒಮ್ಮತದ ಒಪ್ಪಂದ ಸಾಧ್ಯವಾಗಿದ್ದು, ಜಾಗತಿಕ ಚರಿತ್ರೆಯಲ್ಲೇ ಮಹತ್ವದ ದಿನವಾಗಿ ಸಮ್ಮೇಳನದ ಮುಕ್ತಾಯ ದಾಖಲಾಗಲಿದೆ ಎಂದು ಬರಾಕ್ ಒಬಾಮ ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ತಾಪಮಾನ ಕಡಿತದ ವಿಶ್ವಶೃಂಗದ ಒಪ್ಪಂದ ಒಂದು ಚಾರಿತ್ರಿಕ ಹವಾಮಾನ ನ್ಯಾಯದ ಜಯವಾಗಿದ್ದು, ಅದರಲ್ಲಿ ಯಾರದೇ ಸೋಲು ಗೆಲವಿನ ಪ್ರಶ್ನೆ ಉದ್ಭವಿಸದು. ನಾವೆಲ್ಲಾ ಒಟ್ಟಾಗಿ ನಾಳೆಯ ಹಸಿರು ಜಗತ್ತಿನ ಕಡೆ ದಿಟ್ಟ ಹೆಜ್ಜೆ ಇಟ್ಟಿದ್ದೇವೆ.
-ನರೇಂದ್ರ ಮೋದಿ ಪ್ರಧಾನಿ
ಒಪ್ಪಂದದ ಪ್ರಮುಖ ಅಂಶಗಳು
1 ಜಾಗತಿಕ ತಾಪಮಾನ ಏರಿಕೆಯನ್ನು 2 ಡಿಗ್ರಿ ಸೆ. ಒಳಗಿರುವಂತೆ ನೋಡಿಕೊಳ್ಳುವುದು, 1.5 ಡಿಗ್ರಿ ಸೆ. ಮೀರದಂತೆ ಪ್ರಯತ್ನ ಮಾಡುವುದು.
2 ಪ್ರತಿ ಐದು ವರ್ಷಗಳಿಗೊಮ್ಮೆ ಪ್ರಗತಿ ಪರಿಶೀಲಿಸುವುದು
3 2020ರ ವೇಳೆಗೆ ಸಶಕ್ತ ರಾಷ್ಟ್ರಗಳು ಮುಂದುವರಿಯುತ್ತಿರುವ ರಾಷ್ಟ್ರಗಳಿಗೆ ವಾರ್ಷಿಕ 100 ಬಿಲಿಯನ್ ಡಾಲರ್ ಆರ್ಥಿಕ ನೆರವು ನೀಡುವುದು.
4 ಹಸಿರು ಮನೆ ಅನಿಲ ಪರಿಣಾಮ ಕಡಿತದಲ್ಲಿ ಸಮತೋಲನ
5 ಅಭಿವೃದ್ಧಿ ದೇಶಗಳು ಮಾಲಿನ್ಯ ಇಳಿಸುವಿಕೆ ಮತ್ತು ಅಭಿವೃದ್ಧಿ ಶೀಲ ದೇಶಗಳು ಮಾಲಿನ್ಯ ತಗ್ಗಿಸುವಿಕೆಗೆ ಪ್ರಯತ್ನಿಸಬೇಕು.
6 ಅಭಿವೃದ್ಧಿ ಹೊಂದಿದ ದೇಶಗಳು ಭೂಮಿಯ ತಾಪ ತಗ್ಗಿಸುವ ನಿಟ್ಟಿನಲ್ಲಿ ಜೀವನಕ್ರಮ ಬದಲಿಸಿಕೊಳ್ಳಬೇಕು.
7 ತಾಪಮಾನ ತಗ್ಗಿಸುವುದಕ್ಕಾಗಿ ಅಭಿವೃದ್ಧಿ ಹೊಂದಿದ ದೇಶಗಳು ಹೆಚ್ಚಿನ ಹಣಸಹಾಯ ನೀಡಬೇಕು
8 ತಾಪಮಾನ ಅಳೆಯುವುದಕ್ಕಾಗಿ ಇಡೀ ವಿಶ್ವ ಒಂದೇ ಮಾನದಂಡ ಬಳಸಲಿ.
9 ಹವಾಮಾನ ಬದಲಾವಣೆಯ ಅಂತರ್ ದೇಶೀಯ ಸಮಿತಿಯು 2018ಕ್ಕೆ ಹವಾಮಾನ ಬದಲಾವಣೆ ಕುರಿತಂತೆ ವರದಿ ನೀಡಬೇಕು, ಬಳಿಕ ಮುಂದಿನ ಕ್ರಮದ ಬಗ್ಗೆ ಯೋಚಿಸ ಬೇಕು
10 ತಾಪಮಾನವನ್ನು 1.5ಕ್ಕೆ ಇಳಿಸುವ ಗುರಿ ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ದೇಶಗಳಿಗೂ ಅನ್ವಯ.