ನವದೆಹಲಿ: ದೆಹಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರ ಕಚೇರಿ ಮೇಲಿನ ದಾಳಿಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಆಮ್ ಆದ್ಮಿ ಪಕ್ಷ, ಇದೀಗ ನಮ್ಮ ವಿರುದ್ಧ ಏನ್‌ಬೇಕಾದರೂ ಮಾಡಿಕೊಳ್ಳಿ. ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಬಹಿರಂಗ ಸವಾಲು ಹಾಕಿದೆ.
ಸಿಬಿಐ ದಾಳಿಯ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದೆಹಲಿ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು, ದೆಹಲಿ ಸಿಎಂ ಕಚೇರಿ ಮೇಲಿನ ದಾಳಿಗೆ ಕಾರಣ ಏನು? ಅವರು ನಿನ್ನೆ ಸಹಿ ಮಾಡಿದ್ದ ಕಡತ ಪರಿಶೀಲಿಸಿದ್ದು ಏಕೆ? ಎಂದು ಪ್ರಶ್ನಿಸಿದರು. ಅಲ್ಲದೆ ಕೇಂದ್ರ ಸರ್ಕಾರ ಸಿಬಿಐ ಅನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಕೇಜ್ರಿವಾಲ್ ಅವರ ವಿರುದ್ಧ ಯಾವುದೇ ಸಾಕ್ಷ್ಯ ಸಿಗದ ಹಿನ್ನೆಲೆಯಲ್ಲಿ ಈಗ ನೆಪ ಮಾತ್ರಕ್ಕೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರ ಕಚೇರಿ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಕೇಜ್ರಿವಾಲ್ ಅವರನ್ನೇ ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಸಿಸೋಡಿಯಾ ದೂರಿದರು.
ಇಂದು ಪ್ರಜಾಪ್ರಭುತ್ವದ ಕರಾಳ ದಿನ ಎಂದ ದೆಹಲಿ ಡಿಸಿಎಂ, ಮೋದಿ ಸರ್ಕಾರದಿಂದ ಭ್ರಷ್ಟಾಚಾರದ ಉಪನ್ಯಾಶ ಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಪ್ರಧಾನಿ ಮೋದಿ ಅವರನ್ನು ಸೈಕೋಪಾತ್, ಹೇಡಿ ಎಂದಿದ್ದ ಕೇಜ್ರಿವಾಲ್ ಅವರು ಕ್ಷಮೆಯಾಚಿಸಬೇಕು ಎಂಬ ಬಿಜೆಪಿ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿಸೋಡಿಯಾ, ಮೊದಲು ಅವರು ಮಾಡಿದ ಕೆಲಸಕ್ಕೆ ಕ್ಷಮೆ ಕೇಳಲಿ. ನಂತರ ನಾವು ಬಳಸಿದ ಪದಕ್ಕೆ ಕ್ಷಮೆ ಕೇಳುತ್ತೇವೆ ಎಂದರು.
ಕೇಜ್ರಿವಾಲ್ ಕಚೇರಿ ಮೇಲೆ ದಾಳಿ ಮಾಡಿಲ್ಲ: ಸಿಬಿಐ ಸ್ಪಷ್ಟನೆ
ದೆಹಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರ ಕಚೇರಿ ಮೇಲೆ ದಾಳಿ ನಡೆಸಿದ್ದು, ಸಿಎಂ ಕೇಜ್ರಿವಾಲ್ ಅವರ ಕಚೇರಿ ಮೇಲೆ ದಾಳಿ ಮಾಡಿಲ್ಲ ಎಂದು ಸಿಬಿಐ ವಕ್ತಾರೆ ದೇವ್ ಪ್ರೀತ್ ಸಿಂಗ್ ಅವರು ಸ್ಪಷ್ಟಪಡಿಸಿದ್ದಾರೆ.
2007ರಿಂದ 2014ರವರೆಗೆ ರಾಜೇಂದ್ರ ಕುಮಾರ್ ಹಾಗೂ ಇತರೆ ಆರು ಆರೋಪಿಗಳ ವಿರುದ್ಧ ಅಧಿಕಾರ ದುರುಪಯೋಗದ ಆರೋಪ ಇದ್ದು, ಇದು ಹಳೆ ಪ್ರಕರಣ. ಹೀಗಾಗಿ ದೆಹಲಿ ಹಾಗೂ ಉತ್ತರ ಪ್ರದೇಶ ಸೇರಿದಂತೆ 14 ಕಡೆ ಸಿಬಿಐ ದಾಳಿ ನಡೆಸಿದೆ ಎಂದು ಸಿಂಗ್ ತಿಳಿಸಿದ್ದಾರೆ.