ಅಹಮದಾಬಾದ್: ದೆಹಲಿ ಕ್ರಿಕೆಟ್ ಮಂಡಲಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ "ಸತ್ಯ ನುಡಿದಿದ್ದಕ್ಕೆ" ಪಕ್ಷದಿಂದ ನನ್ನನ್ನು ಉಚ್ಛಾಟಿಸಿರುವುದು ದುರದೃಷ್ಟಕರ ಎಂದು ಬಿಜೆಪಿ ಸಂಸದ ಕೀರ್ತಿ ಅಜಾದ್ ಬುಧವಾರ ಹೇಳಿದ್ದಾರೆ.
"ಪಕ್ಷ ವಿರೋಧಿ ಚಟುವಟಿಕೆ ನಾನೇನು ಮಾಡಿದ್ದೇನೆ?" ಎಂದು ಬಿಹಾರದ ದರ್ಭಂಗಾ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಮೂರನೇ ಬಾರಿಯ ಸಂಸದ ಪತ್ರಕರ್ತರೊಂದಿಗೆ ಮಾತನಾಡುವಾಗ ಕೇಳಿದ್ದಾರೆ.
ಅರುಣ್ ಜೇಟ್ಲಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಮಂಡಲಿ (ಡಿಡಿಸಿಎ) ಅಧ್ಯಕ್ಷರಗಿದ್ದಾಗಲೇ ಹೆಚ್ಚಿನ ಹಗರಣ ನಡೆದಿದ್ದರೂ ನಾನು ಅವರ ವಿರುದ್ಧ ಮಾತನಾಡಿಲ್ಲ ಎಂದು ಕೂಡ ಕೀರ್ತಿ ಹೇಳಿದ್ದಾರೆ.
೨೦೧೩ ರವರೆಗೆ ಡಿಡಿಸಿಎ ಅಧ್ಯಕ್ಷರಾಗಿ ೧೩ ವರ್ಷಗಳ ಕಾಲ ಜೇಟ್ಲಿ ಆಡಳಿತ ನಡೆಸಿದ್ದರು.
ಈ ಪ್ರಕರಣ ಬೆಳಗಿಗೆ ತರಲು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಜೊತೆಗೆ ಸೇರಿದ್ದೀರ ಎಂಬ ಪ್ರಶ್ನೆಗೆ ಈ ಊಹಾಪೋಹವನ್ನು ಅಲ್ಲಗೆಳೆದಿರುವ ಕೀರ್ತಿ "ನಾನು ಎತ್ತಿದ ಪ್ರಕರಣವನ್ನು ಅವರು ಮಾತನಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.
ಮುಂದಿನ ಕಾರ್ಯಕ್ರಮವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೀರ್ತಿ "ಈಗಷ್ಟೇ ಮನರಂಜನೆ ಪ್ರಾರಂಭವಾಗಿದೆ. ಏನಾಗುತ್ತೋ ನೋಡೋಣ" ಎಂದಿದ್ದಾರೆ.