ಲಕನೌ: ಅಯೋಧ್ಯೆ ಮತ್ತು ಮಥುರಾದಲ್ಲಿ ಮಂದಿರ ನಿರ್ಮಿಸಲು ಮುಸ್ಲಿಮರು ಸಹಕರಿಸಬೇಕು ಎಂದು ಹೇಳಿಕೆ ನೀಡಿದ್ದ ಉತ್ತರಪ್ರದೇಶದ ರಾಜ್ಯ ಸಚಿವ ಓಂಪಾಲ್ ನೆಹ್ರಾ ಅವರನ್ನು ಮಂತ್ರಿ ಸ್ಥಾನದಿಂದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಜಾ ಮಾಡಿದ್ದಾರೆ.
"ನೆನ್ನೆ ಮುಖ್ಯಮಂತ್ರಿಗಳು ನೆಹ್ರಾ ಅವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಿದ್ದಾರೆ" ಎಂದು ಸಮಾಜವಾದಿ ಪಕ್ಷದ ವಕ್ತಾರ ರಾಜೇಂದ್ರ ಚೌಧರಿ ಹೇಳಿದ್ದಾರೆ.
ಅಯೋಧ್ಯದಲ್ಲಿ ರಾಮಮಂದಿರ ನಿರ್ಮಾಣದ ವಿಷಯವನ್ನು ಮತ್ತೆ ಎತ್ತಿರುವ ವಿಶ್ವ ಹಿಂದೂ ಪರಿಷತ್ ಕೆಲವೇ ದಿನಗಳ ಹಿಂದೆ ಎರಡು ಟ್ರಕ್ ಗಳಲ್ಲಿ ಕಲ್ಲುಗಳನು ತಂದಿಳಿಸಿತ್ತು. ಈ ಹಿನ್ನಲೆಯಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ತಮ್ಮ ಸಚಿವರ ಮೇಲೆ ಈ ಕ್ರಮ ಕೈಗೊಂಡಿದ್ದಾರೆ.
ವಿವಾದಿತ ಸ್ಥಳಗಳಾದ ಅಯೋದ್ಯ ಮತ್ತು ಮಥುರಾಗಳಲ್ಲಿ ಮಂದಿರ ಕಟ್ಟಲು ಮುಸ್ಲಿಮರು ಸಹಕರಿಸಿದರೆ ವಿ ಎಚ್ ಪಿ ಅಂತಹ ಸಂಸ್ಥೆಗಳಿಗೆ ಅಸ್ತಿತ್ವ ಇರುವುದಿಲ್ಲ ಎಂದು ನೆಹ್ರಾ ಡಿಸೆಂಬರ್ ೨೩ ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.
"ಅಯೋಧ್ಯ ಅಲ್ಲದೆ ಇನ್ನೆಲ್ಲಿ ರಾಮಮಂದಿರ ಕಟ್ಟಲು ಸಾಧ್ಯ? ಇದು ಭಾವನಾತ್ಮಕ ವಿಷಯ. ಮಥುರಾದಲ್ಲಿ ನಾವು ಕೃಷ್ಣನನ್ನು ಪೂಜಿಸುತ್ತೇವೆ. ಮುಸ್ಲಿಮರು ಇದರ ಬಗ್ಗೆ ಯೋಚಿಸಿ ಈ ಸ್ಥಳಗಳಲ್ಲಿ ಮಂದಿರ ನಿರ್ಮಾಣಕ್ಕೆ ಸ್ವಯಂಸೇವೆಗಾಗಿ ಮುಂದೆ ಬರಬೇಕು. ವಿ ಎಚ್ ಪಿ ಅಂತಹ ಸಂಸ್ಥೆಗಳ ಬಲೆಗೆ ಬೀಳಬಾರದು" ಎಂದು ನೆಹ್ರಾ ಹೇಳಿದ್ದರು.