ಲಾಹೋರ್: ಅಫ್ಘಾನಿಸ್ತಾನ ಪ್ರವಾಸದ ನಂತರ ಕಾಬೂಲ್ ನಿಂದ ನೇರವಾಗಿ ಲಾಹೋರ್ ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಪ್ ಅವರು ಖುದ್ದು ವಿಮಾನ ನಿಲ್ದಾಣಕ್ಕೆ ಆಗಮಿಸಿ, ಕೆಂಪು ಹಾಸಿನ ಸ್ವಾಗತ ನೀಡಿದರು,
ಇಂದು 66ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ನವಾಜ್ ಷರೀಫ್ ಅವರಿಗೆ ದೂರವಾಣಿ ಮೂಲಕ ಮೋದಿ ಶುಭಾಶಯ ಕೋರಿದ್ದರು. ಈ ವೇಳೆ ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ನವಾಜ್ ಷರೀಫ್ ಮೋದಿಗೆ ಆಹ್ವಾನ ನೀಡಿದ್ದರು.
ಈ ಹಿನ್ನೆಲೆಯಲ್ಲಿ ದೆಹಲಿಗೆ ಆಗಮಿಸುವ ಮಾರ್ಗ ಮಧ್ಯ ಲಾಹೋರ್ ಗೆ ಭೇಟಿ ನೀಡಿರುವ ಮೋದಿ, ಪಾಕಿಸ್ತಾನ ಪ್ರಧಾನಿ ನಿವಾಸಕ್ಕೆ ತೆರಳಿದ್ದಾರೆ.
ಇಂದು ಬೆಳಗ್ಗೆ ಕಾಬೂಲ್ ನಲ್ಲಿ ಭಾರತ ಸರ್ಕಾರದಿಂದ ನಿರ್ಮಾಣಗೊಂಡಿದ್ದ ನೂತನ ಪಾರ್ಲಿಮೆಂಟ್ ಅನ್ನು ಉದ್ಘಾಟಿಸಿ ಮಾತನಾಡಿದ ಮೋದಿ, ಅಫ್ಘಾನಿಸ್ತಾನದಲ್ಲಿ ಉಗ್ರ ಚಟುವಟಿಕೆ ಕುರಿತಂತೆ ಪಾಕ್ ವಿರುದ್ಧ ವಾಗ್ದಾಳಿ ಕೂಡಾ ನಡೆಸಿದ್ದರು.
ಇನ್ನು ಪ್ರಧಾನಿ ಪಾಕಿಸ್ತಾನ ಭೇಟಿಯನ್ನು ಎನ್ ಡಿಎ ಮಿತ್ರ ಪಕ್ಷ ಶಿವಸೇನೆ ಕಟುವಾಗಿ ಟೀಕಿಸಿದ್ದು, ಫೋಟೋಗೆ ಪೋಸ್ ಕೊಡಲು ಪ್ರಧಾನಿ ಮೋದಿ ಪಾಕ್ ಗೆ ಭೇಟಿ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.
ಶಿಷ್ಟಾಚಾರ ಬದಿಗೊತ್ತಿ ಮೋದಿ ಸ್ವಾಗತಿಸಿದ ಷರೀಫ್
ಪ್ರಧಾನಿ ನರೇಂದ್ರ ಮೋದಿ ಪಾಕ್ ಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸುಮಾರು 20, 30 ನಿಮಿಷಗಳ ಮೊದಲೇ ಲಾಹೋರ್ ಏರ್ ಫೋರ್ಟ್ ಗೆ ಆಗಮಿಸಿದ ಪಾಕ್ ಪ್ರಧಾನಿ ನವಾಜ್ ಷರೀಫ್, ಮೋದಿ ಆಗಮಿಸುತ್ತಿದ್ದಂತೆಯೇ ಎಲ್ಲಾ ಶಿಷ್ಟಾಚಾರ ಬದಿಗೊತ್ತಿ ತಾವೇ ಖುದ್ದಾಗಿ ಮೋದಿಯನ್ನು ಬರಮಾಡಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics