ಪ್ರಧಾನ ಸುದ್ದಿ

ಮತದಾರರ ಪಟ್ಟಿಯಲ್ಲಿ ಸಚಿವರ ಹೆಸರೇ ಇರಲಿಲ್ಲ!

Srinivasamurthy VN

ಬೆಂಗಳೂರು: ಭಾನುವಾರ ನಡೆದ ವಿಧಾನ ಪರಿಷತ್ ಚುನಾವಣೆ ಹಲವು ಕುತೂಹಲಕಾರಿ ಘಟನೆಗಳಿಗೆ ಸಾಕ್ಷಿಯಾಯಿತು. ಪ್ರಮುಖವಾಗಿ ಮತದಾರರ ಪಟ್ಟಿಯಲ್ಲಿ ಸಚಿವರ ಹೆಸರುಗಳೇ ಬಿಟ್ಟು ಹೋಗಿರುವುದು ಹಲವು ಗೊಂದಲಕ್ಕೆ ಕಾರಣವಾಯಿತು.

ಸಚಿವರಾದ ರಮಾನಾಥರೈ, ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಹೆಸರುಗಳು ಮತದಾರರ ಪಟ್ಟಿಯಿಂದ ಕೈ ಬಿಟ್ಟು ಹೋಗಿತ್ತು. ಇದಲ್ಲದೆ ಬೆಳಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೀರ್ ಕುಮಾರ್ ಪಾಟೀಲ್ ಹಾಗೂ ಬಿಜೆಪಿಯ ರಾಮಚಂದ್ರಗೌಡ ಹೆಸರು ಕೂಡ ಇಲ್ಲದೇ ಹೋಗಿದ್ದರಿಂದ ಕೆಲ ಕಾಲ ಪರದಾಡುವಂತಾಗಿತ್ತು. ಬಂಟ್ವಾಳ ತಾಲ್ಲೂಕು ಪಂಚಾಯತ್ ಕಚೇರಿಗೆ ತೆರಳಿದ ಅರಣ್ಯ ಸಚಿವ ರಮಾನಾಥ್ ರೈರವರಿಗೆ ಅಲ್ಲಿನ ಸಿಬ್ಬಂದಿ ಪಟ್ಟಿಯಲ್ಲಿ ಹೆಸರು ಇಲ್ಲ ಎಂದು ಸೂಚಿಸಿದರು. ಇದರಿಂದ ಗಲಿಬಿಲಿಗೊಂಡ ರಮಾನಾಥ್ ರೈರವರು, ಕಳ್ಳಿ ಗ್ರಾಮ ಪಂಚಾಯತ್ ಮತಗಟ್ಟೆಗೆ ತೆರಳಿದಾಗ ಅಲ್ಲಿಯೂ ಅವರ ಹೆಸರಿರಲಿಲ್ಲ. ಹೆಸರು ಎಲ್ಲಿ ಎಂದು ಹುಡುಕುತ್ತಿರುವಾಗಲೇ ಬಂಟ್ವಾಳ ತಾಲೂಕು ಪಂಚಾಯತ್ ಮತಗಟ್ಟೆಯಲ್ಲಿಯೇ ತಮ್ಮ ಹೆಸರು ಇರುವ ಬಗ್ಗೆ ಮಾಹಿತಿ ಬಂದಿತು. ಕೂ‌ಡಲೇ ಮತಗಟ್ಟೆಗೆ ಧಾವಿಸಿದ ಸಚಿವರು ಮತಚಲಾಯಿಸಿ ನಿರಾಳರಾದರು.

ಇನ್ನು ಆರೋಗ್ಯ ಸಚಿವ ಯು.ಟಿ. ಖಾದರ್‌ರವರು ಮಂಗಳೂರು ತಾಲೂಕು ಪಂಚಾಯಿತಿ ಕಚೇರಿ ಮತಗಟ್ಟೆಗೆ ಬಂದಾಗ ಅವರ ಹೆಸರೇ ನಾಪತ್ತೆಯಾಗಿತ್ತು. ಇದರಿಂದ ತೀವ್ರ ನಿರಾಸೆಗೊಂಡ ಅವರು ಸ್ವಕ್ಷೇತ್ರ ಉಲ್ಲಾಳಕ್ಕೆ ವಾಪಸ್ಸಾಗಿ ಅಲ್ಲಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಬೆಳಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೀರ್ ಕುಮಾರ್ ಪಾಟೀಲ್‌ರವರ ಹೆಸರೇ ಮತಗಟ್ಟೆಯಲ್ಲಿ ನಾಪತ್ತೆಯಾಗಿತ್ತು. ಕೊನೆಗೂ ಹೆಸರು ಪತ್ತೆ ಮಾಡಿ ಮತ ಚಲಾಯಿಸಿದರು.

ಬಿಜೆಪಿ ನಾಯಕ ರಾಮಚಂದ್ರಗೌಡರವರ ಹೆಸರು ಇಲ್ಲದಿದ್ದರಿಂದ ಸ್ವಲ್ಪ ಹೊತ್ತು ಗರಂ ಆದ ಘಟನೆ ನಡೆಯಿತು. ಬನಶಂಕರಿ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿನ ಮತಗಟ್ಟೆಯಲ್ಲಿ ಅವರ ಹೆಸರಿರಲಿಲ್ಲ. ಇದರಿಂದ ಸಿಟ್ಟಾದ ಅವರು ಏಕಾ-ಏಕಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಒಂದು ಹಂತದಲ್ಲಿ ಚುನಾವಣೆಯನ್ನೇ ರದ್ದು ಮಾಡಬೇಕು ಎಂದು ಆಗ್ರಹಪಡಿಸಿದರು. ಕೊನೆಗೆ ಅಧಿಕಾರಿಗಳು ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಹುಡುಕಿಕೊಟ್ಟರು.

SCROLL FOR NEXT