ಪ್ರಧಾನ ಸುದ್ದಿ

ಪರಿಷತ್ ರಣಾಂಗಣ: ಮತದಾನ ಮುಕ್ತಾಯ

Srinivasamurthy VN

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ವಿಧಾನಪರಿಷತ್ ಚುನಾವಣೆಯ ಮತದಾನ ಪ್ರಕ್ರಿಯೆ ಅಂತ್ಯಗೊಂಡಿದ್ದು, ಬಹುತೇಕ ಮತದಾನ ಪ್ರಕ್ರಿಯೆ ಯಶಸ್ವಿಯಾಗಿದೆ.

ವಿಧಾನ ಪರಿಷತ್ ನ ಒಟ್ಟು 25 ಸ್ಥಾನಗಳಿಗೆ ಭಾನುವಾರ ಬೆಳಗ್ಗೆ 8ರಿಂದ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 4 ಗಂಟೆದೆ ಮುಕ್ತಾಯವಾಯಿತು. ಮತದಾನಕ್ಕಾಗಿ ರಾಜ್ಯಾದ್ಯಂತ ಒಟ್ಟು 6,  314 ಮತಗಟ್ಟೆಗಳಲ್ಲಿ ಮತದಾನಕ್ಕಾಗಿ  ಚುನಾವಣಾ ಆಯೋಗ ಅನುವು ಮಾಡಿಕೊಟ್ಟಿತ್ತು. ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ, ಜಿಲ್ಲಾಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ, ಪಟ್ಟಣ  ಪಂಚಾಯಿತಿ, ಪುರಸಭೆ ಮತ್ತು ನಗರಸಭೆ ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಮತದಾನ ಮಾಡಿದ ಗಣ್ಯರು
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಹೊಳೆ ನರಸೀಪುರದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅರಕಲಗೂಡಿನಲ್ಲಿ, ವಿಧಾನ ಪರಿಷತ್ ಸದಸ್ಯ ಪಟೇಲ್  ಶಿವರಾಂ, ಶಾಸಕರಾದ ಎಚ್.ಎಸ್.ಪ್ರಕಾಶ್ ಹಾಸನದಲ್ಲಿ, ಎಚ್ ಕೆ ಕುಮಾರಸ್ವಾಮಿ ಆಲೂರಿನಲ್ಲಿ, ವೈ.ಎನ್.ರುದ್ರೇಶಗೌಡ ಬೇಲೂರಿನಲ್ಲಿ, ಸಿ.ಎನ್.ಬಾಲಕೃಷ್ಣ ಚನ್ನರಾಯಪಟ್ಟಣದಲ್ಲಿ,  ಕೆ.ಎಂ.ಶಿವಲಿಂಗೇಗೌಡ ಅರಸೀಕೆರೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಕೊಪ್ಪಳ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಪ್ರಮಾಣದ ಅಂದರೆ ಶೇ. 99.90 ರಷ್ಟು ಮತದಾನವಾಗಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಡಿಮೆ ಅಂದರೆ ಶೇ.98 ರಷ್ಟು ಮತದಾನವಾಗಿದೆ. ಉಳಿದಂತೆ ಕೊಡಗು ಕ್ಷೇತ್ರ ಶೇ.99, ಕೋಲಾರ-ಚಿಕ್ಕಬಳ್ಳಾಪುರ ಕ್ಷೇತ್ರ-ಶೇ.99.90, ಧಾರವಾಡ-ಗದಗ-ಹಾವೇರಿ ಕ್ಷೇತ್ರ-ಶೇ.99.46 ರಷ್ಟು, ರಾಮನಗರ ಕ್ಷೇತ್ರ-ಶೇ.99.74, ಕಲಬುರ್ಗಿ-ಯಾದಗಿರಿ  ಕ್ಷೇತ್ರ-99.22, ದಕ್ಷಿಣ ಕನ್ನಡ-ಉಡುಪಿ ಕ್ಷೇತ್ರ-99.59, ಚಿತ್ರದುರ್ಗ ಕ್ಷೇತ್ರ-ಶೇ.99, ಚಿಕ್ಕಮಗಳೂರು ಕ್ಷೇತ್ರ ಶೇ.99.96ರಷ್ಟು ಮತ್ತು ಹಾಸನ ಕ್ಷೇತ್ರ-ಶೇ.99.8ರಷ್ಟು ಮತದಾನವಾಗಿದೆ ಎಂದು  ತಿಳಿದುಬಂದಿದೆ.

ಮತದಾನ ಪ್ರಕ್ರಿಯೆ ವೇಳೆ ಸಾಕಷ್ಟು ಗೊಂದಲಗಳಿತ್ತಾದರೂ, ಒಂದೆರಡು ಘಟನೆಗಳನ್ನು ಹೊರತುಪಡಿಸಿದರೆ ಮತದಾನ ಪ್ರಕ್ರಿಯೆ ಶಾಂತವಾಗಿ ನೆರವೇರಿದೆ. ಇದೇ ಡಿಸೆಂಬರ್ 30ರಂದು ಫಲಿತಾಂಶ ಪ್ರಕಟವಾಗಲಿದ್ದು, ಎಲ್ಲಾ 125 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

SCROLL FOR NEXT