ಬೆಂಗಳೂರು: ಜನರಲ್ಲಿ ಭಯ ಹುಟ್ಟಿಸುವ ಹಾಗೂ ಶೋಷಣೆ ಮಾಡುವಂತಹ ಮೌಢ್ಯಾಚರಣೆ ನಿಷೇಧ ಕಾಯಿದೆ ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ. ಆದರೆ ಇದಕ್ಕೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.
ಮಾನವ ಧರ್ಣಪೀಠದ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಮಾತನಾಡಿದ ಸಿಎಂ, ಜನರಿಗೆ ತೊಂದರೆ ಮಾಡುವಂತ ಮೌಢ್ಯಗಳನ್ನು ನಿಷೇಧಿಸಲು ಸರ್ಕಾರ ಹಿಂಜರಿವುದಿಲ್ಲ. ಆದರೆ ಜನರ ಒಳಿತಿಗಾಗಿ ಇರುವ ಆಚರಣೆಗಳು ಹಾಗೂ ನಂಬಿಕೆಗಳು ಮುಂದುವರೆಯುತ್ತವೆ ಎಂದರು.
ಇದೇ ವೇಳೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದರೂ ಅದನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಸರ್ಕಾರಕ್ಕೆ ಇದೆ. ಮೌಢ್ಯಾಚರಣೆಗಳನ್ನು ನಿಷೇಧಿಸಲು ಕೆಲವು ಪ್ರಗತಿಪರ ಸಂಘಟನೆಗಳು ಒತ್ತಾಯಿಸುತ್ತಿದ್ದು, ಅದಕ್ಕೆ ಪೂರಕವಾಗಿ ಸರ್ಕಾರ ಸ್ಪಂದಿಸಲಿದೆ ಎಂದರು.
12ನೇ ಶತಮಾನದಲ್ಲೇ ಬಸವಾದಿ ಶರಣರು ಮೌಢ್ಯಗಳ ವಿರುದ್ಧ ಜಾಗೃತಿ ಮೂಡಿಸಿದ್ದರು. ಆದರೆ ಇಂದಿಗೂ ಮೌಢ್ಯಾಚಾರಣೆಗಳು ಜೀವಂತವಾಗಿವೆ. ಅವುಗಳನ್ನು ತೊಡೆದು ಹಾಕದಂತೆ ಪಟ್ಟಭದ್ರ ಹಿತಾಸಕ್ತಿಗಳು ಯತ್ನಿಸುತ್ತಿವೆ ಎಂದು ಸಿಎಂ ಹೇಳಿದರು.