ಪುಣೆ: ಇನ್ಫೋಸಿಸ್ ಪುಣೆ ಆವರಣದಲ್ಲಿ ರೇಪ್ ನಡೆದಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಇದರ ಬಗ್ಗೆ ತನಿಖೆ ನಡೆಸುತ್ತಿದ್ದು, ತಮ್ಮ ನೀತಿಯ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಲಿದ್ದೇವೆ ಎಂದು ಸಂಸ್ಥೆ ತಿಳಿಸಿದೆ.
ಹೇಳಿಕೆ ನೀಡಿರುವ ಇನ್ಫೋಸಿಸ್ ಸಂಸ್ಥೆ "'ಗುತ್ತಿಗೆ ಸಿಬ್ಬಂದಿಗಳು' ರೇಪ್ ನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇರೆಗೆ ತನಿಖೆ ನಡೆಸಲಾಗುತ್ತಿದ್ದು, ಪೊಲೀಸರ ಜೊತೆಗೂ ನಿಕಟ ಸಂಪರ್ಕದಲ್ಲಿದ್ದು ಅವರ ತನಿಖೆಗೆ ಸಹಕರಿಸುತ್ತಿದ್ದೇವೆ" ಎಂದಿದೆ.
ಎಲ್ಲ ಇನ್ಫೋಸಿಸ್ ಆವರಣಗಳಲ್ಲೂ ಸುರಕ್ಷಿತ ಕ್ರಮಗಳನ್ನು ಅನುಸರಿಸುತ್ತಿದ್ದು ಲೈಂಗಿಕ ಕಿರುಕುಳ ಘಟನೆಗಳನ್ನು ಸಂಸ್ಥೆ ಸಹಿಸಿಕೊಳ್ಳುವುದಿಲ್ಲ ಮತ್ತು ಇದು ಗುತ್ತಿಗೆ ಸಿಬ್ಬಂದಿಗಳಿಗೂ ಅನ್ವಯಿಸುತ್ತದೆ ಎಂದು ತಿಳಿಸಿದೆ.
"ಸಂಸ್ಥೆಯ ನೀತಿಯ ಪ್ರಕಾರ ಅಗತ್ಯ ಶಿಸ್ತು ಕ್ರಮ ಕೈಗೊಳ್ಳುತ್ತೇವೆ" ಎಂದು ಕೂಡ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕ್ಯಾಂಟೀನ್ ನಲ್ಲಿ ಕೆಲಸ ಮಾಡುವ ಸಂಸ್ತ್ರಸ್ತೆಯನ್ನು ರೇಪ್ ಮಾಡಿರುವುದಕ್ಕೆ ಇಬ್ಬರು ನೌಕರರನ್ನು ಇಂದು ಬಂಧಿಸಲಾಗಿದ್ದು, ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಶೌಚಾಲಯದಲ್ಲಿ ಈ ರೇಪ್ ನಡೆದಿದ್ದು, ಮತ್ತೊಬ್ಬ ಇದನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾನೆ ಎಂದು ತಿಳಿದಿದೆ.