ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಒಂದು ಸ್ಥಾನ ಹೆಚ್ಚು ಗೆದ್ದರೂ ರಾಜಕೀಯ ಸನ್ಯಾಸ ಸ್ವೀಕರಿಸುವುದಾಗಿ ಸವಾಲು ಹಾಕಿದ್ದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು ಇದೀಗ ಯೂ ಟರ್ನ್ ಹೊಡೆದಿದ್ದು, ರಾಜಕೀಯ ಸನ್ಯಾಸ ಸ್ವೀಕರಿಸಲ್ಲ ಎಂದಿದ್ದಾರೆ.
ಡಿಸೆಂಬರ್ 27ರಂದು ಪರಿಷತ್ ನ 25 ಸ್ಥಾನಗಳಿಗೆ ನಡೆದ ಚುನಾಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಕಾಂಗ್ರೆಸ್ ಪಕ್ಷ 13 ಸ್ಥಾನಗಳಲ್ಲಿ ಜಯಗಳಿಸಿದರೆ, ಬಿಜೆಪಿ 6 ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸಿದೆ. ಆ ನಿಟ್ಟಿನಲ್ಲಿ ಈಶ್ವರಪ್ಪ ರಾಜಕೀಯ ಸನ್ಯಾಸ ಸ್ವೀಕರಿಸಬೇಕು. ಆದರೆ ಫಲಿತಾಂಶದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಸವಾಲನ್ನು ಸ್ವೀಕರಿಸಿಯೇ ಇಲ್ಲ, ಹೀಗಾಗಿ ರಾಜಕೀಯ ಸನ್ಯಾಸ ಸ್ವೀಕರಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಚುನಾವಣೆ ಪ್ರಚಾರದ ವೇಳೆ, ಕಾಂಗ್ರೆಸ್ ಬಿಜೆಪಿಗಿಂತ ಒಂದೇ ಒಂದು ಸ್ಥಾನ ಹೆಚ್ಚು ಗೆದ್ದರೂ ರಾಜಕೀಯ ನಿವೃತ್ತಿಯಾಗುವುದಾಗಿ ಹೇಳಿದ್ದು ನಿಜ. ಆದರೆ ನನ್ನ ಸವಾಲನ್ನು ಸಿಎಂ ಸ್ವೀಕರಿಸಲಿಲ್ಲ. ಯಾವ ರೀತಿ ಚುನಾವಣೆಯಲ್ಲಿ ಜಯಗಳಿಸಿದ್ದಾರೆಂಬ ಬಗ್ಗೆ ನಾನು ಚರ್ಚೆ ಮಾಡಲು ಹೋಗಲ್ಲ. ಆದರೆ ನನ್ನ ಸವಾಲು ಸ್ವೀಕರಿಸದ ಹಿನ್ನೆಲೆಯಲ್ಲಿ ರಾಜಕೀಯ ಸನ್ಯಾಸ ಸ್ವೀಕರಿಸುವ ಪ್ರಶ್ನೆಯೇ ಬರೋದಿಲ್ಲ ಎಂದು ಈಶ್ವರಪ್ಪ ಸಮಜಾಯಿಷಿ ನೀಡುವ ಮೂಲಕ ಉಲ್ಟಾ ಹೊಡೆದಿದ್ದಾರೆ.
ಇನ್ನು ಉಲ್ಟಾ ಹೊಡೆದಿರುವ ಈಶ್ವರಪ್ಪ ಅವರು ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತಿರುವಂತೆ ಅಣಕು ಪ್ರದರ್ಶನ ಮಾಡಿ, ಅವರ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.