ನವದೆಹಲಿ: ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ನಕಾರಾತ್ಮಕವಾಗಿ ಮಾತನಾಡುತ್ತಾರೆ. ಈ ಮೂಲಕ ಅವರು ಸದಾ ಸುದ್ದಿಯಲ್ಲಿರಲು ಬಯಸುತ್ತಾರೆ ಎಂದು ದೆಹಲಿ ಬಿಜೆಪಿ ಅಭ್ಯರ್ಥಿ ಕಿರಣ್ ಬೇಡಿ ಹೇಳಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಕೇಜ್ರಿವಾಲ್ ವಿರುದ್ಧ ಟೀಕಾ ಪ್ರಹಾರ ಮಾಡಿದ ಬೇಡಿ, ನಕಾರಾತ್ಮಕ ವಿಷಯಗಳು ಅವರಿಗೆ ಒಪ್ಪುತ್ತವೆ. ಅವರು ನಕಾರಾತ್ಮಕ ವಿಷಯಗಳನ್ನು ನಂಬುತ್ತಾರೆ. ಇಲ್ಲವಾದರೆ ಅವರು ಮಾಧ್ಯಮದವರ ಗಮನ ಸೆಳೆಯುವುದಾದರೂ ಹೇಗೆ? ಎಂದು ಕೇಜ್ರಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.
ನಿನ್ನೆ ಪ್ರಚಾರ ಕಾರ್ಯಕ್ರಮದಲ್ಲಿ ನಾನು ತಪ್ಪಿತಸ್ಥನಾಗಿದ್ದರೆ ಸರ್ಕಾರ ನನ್ನನ್ನು ಬಂಧಿಸಲಿ ಎಂದು ಕೇಜ್ರಿವಾಲ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕಿರಣ್ ಬೇಡಿ, ಕೇಜ್ರಿವಾಲ್ ಅವರ ಈ ಹೇಳಿಕೆಯಿಂದ ನನಗೇನೂ ಅಚ್ಚರಿಯಾಗಿಲ್ಲ, ಹಳೇ ಬುದ್ಧಿ ಎಂದೂ ಹೋಗುವುದಿಲ್ಲ ಎಂದಿದ್ದಾರೆ. ಅದೇ ವೇಳೆ ಕೇಜ್ರಿವಾಲ್ ತಂತ್ರಕ್ಕೆ ಯಾರೂ ಬಲಿಯಾಗಬೇಡಿ ಎಂದು ಕಿರಣ್ ಬೇಡಿ ದೆಹಲಿ ಜನರಿಗೆ ಎಚ್ಚರಿಕೆ ನೀಡಿದ್ದಾರೆ.