ಪ್ರಧಾನ ಸುದ್ದಿ

ಬಿಜೆಪಿ ಧೂಳಿಪಟ, ಹೊಣೆ ಹೊರುತ್ತೇನೆ ಎಂದ ಕಿರಣ್ ಬೇಡಿ

Guruprasad Narayana

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುಂದುವರೆದಂತೆ, ಎಎಪಿ ಪಕ್ಷ ಉಳಿದೆಲ್ಲ ಪಕ್ಷಗಳನ್ನು ಗುಡಿಸಿ ಹಾಕುತ್ತಿರುವುದು ನಿಚ್ಚಳವಾಗುತ್ತಿದೆ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ದೆಹಲಿಯಲ್ಲಿ ಧೂಳಿಪಟವಾಗಿದೆ. ಇಂತಹ ದಯನೀಯ ಪರಿಸ್ಥಿತಿಯಲ್ಲಿ ೧೦ ಸ್ಥಾನಗಳನ್ನು ಗಳಿಸುವುದು ಬಿಜೆಪಿಗೆ ಕಷ್ಟವಾಗಲಿದೆ.

ದೆಹಲಿಯ ಕೃಷ್ಣನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಇದು ಆಪ್ ಪಕ್ಷದ ಅರವಿಂದ್ ಕೇಜ್ರಿವಾಲ್ ಜೊತೆ ನಡೆದ ಮ್ಯಾಚ್. ಆಟದಲ್ಲಿ ಒಬ್ಬರೇ ಗೆಲ್ಲಲು ಸಾಧ್ಯ. ಅರವಿಂದ ಗೆದ್ದಿದ್ದಾರೆ ಎಂದು ಕಿರಣ್ ಬೇಡಿ ಸೋಲೊಪ್ಪಿಕೊಂಡಿರುವುದಲ್ಲದೆ, ಸೋಲಿನ ಪೂರ್ಣ ಹೊಣೆ ನನ್ನದೇ ಎಂದಿದ್ದಾರೆ.

"ನಾವಿಬ್ಬರೂ ಸ್ಪರ್ಧಿಸಿದ್ದೇವೆ. ಇಬ್ಬರೂ ಆಟ ಆಡುತ್ತಿದ್ದೇವೆ. ಆಡುವಾಗ ಇಬ್ಬರೂ ಆಡುತ್ತೇವೆ ಆದರೆ ಗೆಲ್ಲುವುದು ಒಬ್ಬನೇ" ಎಂದು ತಮ್ಮ ಮನೆಯ ಹೊರಗೆ ನೆರೆದಿದ್ದ ವರದಿಗಾರರಿಗೆ ತಿಳಿಸಿದ್ದಾರೆ.

ದೆಹಲಿ ಚುನಾವಣೆ ಫಲಿತಾಂಶ ನರೇಂದ್ರ ಮೋದಿ ಅವರ ಆಡಳಿತಕ್ಕೆ ಜನ ನೀಡಿದ ಉತ್ತರ ಎಂಬುದನ್ನು ಕಿರಣ್ ಬೇಡಿ ತಳ್ಳಿಹಾಕಿದ್ದಾರೆ.

"ಪಕ್ಷ ಗೆದ್ದರೆ ಅದು ಪಕ್ಷದ ಸಾಮೂಹಿಕ ಗೆಲುವಾಗುತ್ತದೆ. ಸೋತರೆ ಅದು ವೈಯಕ್ತಿಕ. ನಾನು ಈ ಸೋಲಿನ ಸಂಪೂರ್ಣ ಹೊಣೆ ಹೊರುತ್ತೇನೆ. ನನ್ನ ಪೊಲೀಸ್ ದಿನಗಳಲ್ಲೂ ಹಾಗೆಯೇ, ಸೋತಾಗ ಅದು ನನ್ನ ಹೊಣೆಯಾಗಿತ್ತು" ಎಂದಿದ್ದಾರೆ ಬೇಡಿ.

ಸದ್ಯದ ಮುನ್ನಡೆಯ ಪ್ರಕಾರ ಎಎಪಿ ಪಕ್ಷ ೬೦ ಸ್ಥಾನಗಳಿಗೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.

SCROLL FOR NEXT