ನವದೆಹಲಿ: ನಿಯೋಜಿತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದಿಕ್ಷಿತ್ ಹಾಗೂ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಕಿರಣ್ ಬೇಡಿ ಅವರಿಗೆ ಆಹ್ವಾನ ನೀಡಲು ಆಮ್ ಆದ್ಮಿ ಪಕ್ಷ ನಿರ್ಧರಿಸಿದೆ.
ಫೆಬ್ರವರಿ 14ರಂದು ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಕೇಜ್ರಿವಾಲ್ ಅವರು ಎರಡನೇ ಬಾರಿ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದು, ಈ ಸಮಾರಂಭದಲ್ಲಿ ಮೋದಿ, ಸೇರಿದಂತೆ ಹಲವು ಗಣ್ಯರು ಭಾಗವಹಿಸುವ ಸಾಧ್ಯತೆ ಇದೆ.
ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಎಎಪಿ ಕೌಶಂಬಿಯಿಂದ ರಾಮ್‌ಲೀಲಾ ಮೈದಾನದವರೆಗೂ ರೋಡ್ ಶೋ ನಡೆಸಲಿದೆ. ಇನ್ನು ಉತ್ತರ ಪ್ರದೇಶ ಪೊಲೀಸರು ಕೌಶಂಬಿಯಲ್ಲಿರುವ ನಿಯೋಜಿತ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಭಾರ ಭದ್ರತೆ ಒದಗಿಸಿದ್ದಾರೆ.
ಈ ಮಧ್ಯೆ, ಹಿಂದೆ ಕೇಜ್ರಿವಾಲ್ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ರಾಖಿ ಬಿರ್ಲಾ ಅವರಿಗೆ ಈ ಬಾರಿ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಆದರೆ ಮನಿಶ್ ಸಿಸೋಡಿಯಾ, ಜರ್ನೈಲ್ ಸಿಂಗ್, ಗೋಪಾಲ್ ರೈ ಮತ್ತು ಆದರ್ಶ ಶಾಸ್ತ್ರಿ ಅವರಿಗೆ ಪ್ರಮುಖ ಖಾತೆಗಳನ್ನು ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.